ಶ್ರೀನಗರ (ಜಮ್ಮು ಕಾಶ್ಮೀರ) : ಗಡಿಯಲ್ಲಿ ಪಾಕಿಸ್ತಾನದ ಉಪಟಳ ಹೆಚ್ಚಾಗಿದೆ. ಪಾಕ್ ಆಕ್ರಮಿತ ಜಮ್ಮುಕಾಶ್ಮೀರಕ್ಕೆ ಶಸ್ತ್ರಾಸ್ತ್ರ ಸಾಗಣೆ ಮಾಡುವ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.
ಸೋಮವಾರ ಸಂಜೆ ಉತ್ತರ ಕಾಶ್ಮೀರದ ತಂಗ್ಧರ್ ಸೆಕ್ಟರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ಆರಂಭಿಸಿದ ಸೇನೆ, ಶಸ್ತ್ರಾಸ್ತ್ರ ಸಾಗಣೆಯನ್ನು ವಿಫಲಗೊಳಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಈ ವೇಳೆ ಐದು ಪಿಸ್ತೂಲ್, 10 ಮ್ಯಾಗಜಿನ್‌ಗಳು, 138 ಸುತ್ತು ಮದ್ದುಗುಂಡುಗಳನ್ನು ಒಳಗೊಂಡ ಚೀಲವನ್ನ ವಶಕ್ಕೆ ಪಡೆಯಲಾಗಿದೆ.
ಪಾಕ್ ಅಂತಾರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ಹಣಕಾಸು ಮಾನದಂಡಗಳನ್ನು ಅನುಸರಿಸುವ ವಿಚಾರವಾಗಿ ಜಾಗತಿಕ ಹಣಕಾಸು ಕಾರ್ಯಪಡೆ (ಎಫ್‌ಎಟಿಎಫ್) ಚರ್ಚೆ ಪ್ರಾರಂಭಿಸಿದೆ. ಅಲ್ಲದೆ ಪಾಕ್, ಉಗ್ರರಿಗೆ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆಗೆ ಸಹಾಯ ಮಾಡುತ್ತಿದೆ ಎಂಬ ಆರೋಪವೂ ಕೇಳಿ ಬರ್ತಿದೆ.
ಐದು ದಿವಸಗಳಲ್ಲಿ ಸೇನೆಯು ಪಾಕ್ ಬೆಂಬಲಿತ ಉಗ್ರರ ಸಂಚನ್ನ ವಿಫಲಗೊಳಿಸಿರೋದು ಇದು ಎರಡನೇ ಬಾರಿ. ಅಕ್ಟೋಬರ್ 9 ರಂದು, ಉತ್ತರ ಕಾಶ್ಮೀರದ ನೆರೆಯ ಕೇರನ್ ಸೆಕ್ಟರ್‌ನಲ್ಲಿ ಸೇನೆ ಹಾಗೂ ಜಮ್ಮುಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ನಾಲ್ಕು ಎಕೆ 74 ರೈಫಲ್ಸ್, ಎಂಟು ಮ್ಯಾಗಜಿನ್‌ಗಳು ಮತ್ತು 240 ಎಕೆ ರೈಫಲ್ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು.