ನವದೆಹಲಿ: ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ರಾಷ್ಟ್ರಗಳ ಪಟ್ಟಿಯಿಂದ ಸುಡಾನ್ ಕೈಬಿಟ್ಟಿರುವ ಅಮೆರಿಕದ ನಿರ್ಧಾರವನ್ನು ಭಾರತದ ವಿದೇಶಾಂಗ ಇಲಾಖೆ ಸ್ವಾಗತಿಸಿದ್ದು, ಈ ನಿರ್ಧಾರದಿಂದ ಸಾಕಷ್ಟು ಬದಲಾವಣೆಗಳಾಗಲಿವೆ ಎಂದಿದೆ.
ಜುಬಾ ಶಾಂತಿ ಒಪ್ಪಂದಕ್ಕೆ ಸುಡಾನ್ ಸಹಿ ಹಾಕುವುದನ್ನು ಸ್ವಾಗತಿಸಿರುವ ಭಾರತ ಇದು ಸುಡಾನ್ನಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ. ಸುಡಾನ್ ಅಭಿವೃದ್ಧಿ, ಶಾಂತಿ ಹಾಗೂ ಸುರಕ್ಷತೆಯನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.
ಕಳೆದ ತಿಂಗಳು ಸುಡಾನ್ನ ಸರ್ಕಾರ ಹಲವಾರು ಉಗ್ರಗಾಮಿ ಸಂಘಟನೆಗಳೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದಿಂದ ಉಗ್ರಗಾಮಿ ಗುಂಪುಗಳು ಇನ್ನು ಮುಂದೆ ಯಾವುದೇ ದಾಳಿ ಹಾಗೂ ಗಲಭೆ ಸೃಷ್ಟಿಸುವ ಕೃತ್ಯಗಳಲ್ಲಿ ತೊಡಗಿಕೊಳ್ಳುವುದಿಲ್ಲ ಎಂದು ಮಾತು ಕೊಟ್ಟಿವೆ. ಇದರಿಂದ ಸುಡಾನ್ನಲ್ಲಿ ಶಾಂತಿ ನೆಲಸುವ ಸಾಧ್ಯತೆಗಳಿವೆ.
ಕೆಲವು ದಿನಗಳ ಹಿಂದೆ ಡೊನಾಲ್ಡ್ ಟ್ರಂಪ್ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವ ಪಟ್ಟಿಯಿಂದ ಸುಡಾನ್ ಅನ್ನು ತೆಗೆದುಹಾಕಲಾಗುತ್ತದೆ ಎಂದು ಘೋಷಿಸಿದ್ದರು. ಈಗ ಅದು ಕಾರ್ಯರೂಪಕ್ಕೆ ಬಂದಿದೆ. ಇದರ ಜೊತೆಗೆ ಅಮೆರಿಕದೊಂದಿಗಿನ ಒಪ್ಪಂದದಂತೆ ಇಸ್ರೇಲ್ ಜೊತೆಗಿನ ಸಂಬಂಧವನ್ನು ಸಾಮಾನ್ಯೀಕರಿಸುವುದಾಗಿ ಸುಡಾನ್ ಹೇಳಿಕೊಂಡಿದೆ.
ಇನ್ನು ಸುಡಾನ್‌ನೊಂದಿಗಿನ ಭಾರತದ ಸಂಬಂಧ ಐತಿಹಾಸಿಕವಾಗಿದ್ದು, ಮೌಲ್ಯಗಳ ಆಧಾರದ ಮೇಲೆ ಎರಡೂ ರಾಷ್ಟ್ರಗಳೂ ಒಂದೇ ಎಂದು ವಿದೇಶಾಂಗ ಇಲಾಖೆ ಹೇಳಿಕೆ ನೀಡಿದ್ದು, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ರಾಷ್ಟ್ರಗಳ ಪಟ್ಟಿಯಿಂದ ಸುಡಾನ್ ಅನ್ನು ಕೈಬಿಟ್ಟಿರುವ ಅಮೆರಿಕದ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದು ಹೇಳಿದೆ.
ಇದರೊಂದಿಗೆ ಜುಬಾ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದನ್ನು ಕೂಡಾ ಭಾರತದ ವಿದೇಶಾಂಗ ಇಲಾಖೆ ಅಭಿನಂದಿಸಿದೆ.