ನವದೆಹಲಿ: ಅಯೋಧ್ಯೆ ಭೂ ವಿವಾದ ಸಂಬಂಧ ಸುಪ್ರೀಂಕೋರ್ಟ್ನ ತೀರ್ಪು ಕುರಿತಂತೆ ಪಾಕಿಸ್ತಾನದ ವ್ಯಾಖ್ಯಾನವನ್ನು ಖಂಡಿಸಿರುವ ಭಾರತ, ತನ್ನ ಆಂತರಿಕ ವಿಷಯಗಳಲ್ಲಿ ಪಾಕಿಸ್ತಾನ ಅನಗತ್ಯವಾಗಿ ಪ್ರಸ್ತಾಪಿಸಿದೆ ಎಂದು ತಿರುಗೇಟು ನೀಡಿದೆ.
ಭಾರತದ ಸರ್ವೋಚ್ಛ ನ್ಯಾಯಾಲಯ ನೀಡಿರುವ ತೀರ್ಪು ಭಾರತದ ಸಂಪೂರ್ಣ ಆಂತರಿಕವಾದ ವಿಷಯವಾಗಿದೆ. ಪಾಕಿಸ್ತಾನ ಮಾಡಿರುವ ಅನಗತ್ಯ ಮತ್ತು ಅನಪೇಕ್ಷಿತ ಹೇಳಿಕೆಗಳನ್ನು ತಿರಸ್ಕರಿಸುತ್ತೇವೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಪಾಕಿಸ್ತಾನದ ಗ್ರಹಿಕೆಯ ಕೊರತೆ ಆಶ್ಚರ್ಯಕರವಾಗಿಲ್ಲ. ದ್ವೇಷವನ್ನು ಹರಡುವ ಸ್ಪಷ್ಟ ಉದ್ದೇಶ ಅದು ಹೊಂದಿದೆ. ನಮ್ಮ ಆಂತರಿಕ ವ್ಯವಹಾರಗಳ ಬಗ್ಗೆ ಪ್ರತಿಕ್ರಿಯಿಸುವಂತಹ ರೋಗಗ್ರಸ್ತ ಮನಸ್ಥಿತಿ ಹೊಂದಿರುವುದು ಖಂಡನೀಯ ಎಂದಿದ್ದಾರೆ.
ಈ ನಿರ್ಧಾರವು ಭಾರತದ ಅಲ್ಪಸಂಖ್ಯಾತರು ಇನ್ನು ಮುಂದೆ ಸುರಕ್ಷಿತವಾಗಿಲ್ಲ ಎನ್ನುವ ಮೂಲಕ ಭಾರತದ ಜಾತ್ಯಾತೀತತೆ ಎಂದು ಕರೆಯಲ್ಪಡುವ ಪರಿಕಲ್ಪನೆ ಚೂರುಚೂರಾಗಿದೆ ಎಂದು ಪಾಕ್ ಸುಪ್ರೀಂ ತೀರ್ಪಿನ ಬಗ್ಗೆ ಹೇಳಿಕೆ ನೀಡಿತ್ತು.