ಹೊಸದಿಲ್ಲಿ: ಚೀನಾ ನಿರ್ಮಿತ 5 ಲಕ್ಷ ರ‍್ಯಾಪಿಡ್ ಟೆಸ್ಟಿಂಗ್ ಕಿಟ್ಗಳು ಭಾರತ ತಲುಪಿದ್ದು, ಇವನ್ನು ಆರಂಭಿಕ ಹಂತದ ರೋಗ ಪತ್ತೆಗಾಗಿ ಬಳಸುವುದಿಲ್ಲ. ದೇಶದಲ್ಲಿ ಕೊರೊನಾ ವೈರಸ್ ಹಾಟ್ಸ್ಪಾಟ್ಗಳು ಹೆಚ್ಚುತ್ತಿವೆಯಾ ಅಥವಾ ಕಡಿಮೆಯಾಗುತ್ತಿವೆಯಾ ಎಂಬುದನ್ನು ತಿಳಿಯಲು ಇವನ್ನು ಬಳಕೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಚೀನಾದ ಎರಡು ಕಂಪನಿಗಳು ರ‍್ಯಾಪಿಡ್ ಟೆಸ್ಟ್ ಕಿಟ್ಗಳನ್ನು ಪೂರೈಕೆ ಮಾಡಿದ್ದು, ವ್ಯಕ್ತಿಯ ದೇಹದಲ್ಲಿ ಉತ್ಪತ್ತಿಯಾಗುವ ಪ್ರತಿಕಾಯಗಳ ಪರೀಕ್ಷೆಗೆ ಈ ಕಿಟ್ಗಳನ್ನು ಬಳಸಲಾಗುವುದು ಎಂದು ಐಸಿಎಂಆರ್ನ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಮಣ ಆರ್. ಗಂಗಾಖೇಡ್ಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚೀನಾ ಕಳುಹಿಸಿದ ಕಿಟ್ ದೋಷಪೂರಿತವಾಗಿವೆ ಎಂಬ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಚೀನಾ ಕಿಟ್ಗಳು ಕಡಿಮೆ ಸೂಕ್ಷ್ಮತೆ ಹಾಗೂ ನಿರ್ದಿಷ್ಟತೆ ಹೊಂದಿದ್ದು ನಿಜ. ರ‍್ಯಾಪಿಡ್ ಆ್ಯಂಟಿಬಾಡಿ ಟೆಸ್ಟ್ಗಳನ್ನು ಕೇವಲ ಮೇಲ್ವಿಚಾರಣೆ ಹಾಗೂ ಕಣ್ಗಾವಲಿರಿಸಲು ಮಾತ್ರ ಮಾಡಲಾಗುವುದರಿಂದ ಕಿಟ್ಗಳ ಗುಣಮಟ್ಟದ ಬಗ್ಗೆ ಚಿಂತೆ ಮಾಡುವ ಅವಶ್ಯಕತೆಯಿಲ್ಲ ಎಂದರು.