ನವದೆಹಲಿ: ಗಡಿ ವಿಷಯದಲ್ಲಿ ಕಾಲ್ಕೆರದು ಜಗಳಕ್ಕೆ ಬರುತ್ತಿರುವ ಚೀನಾವು, ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಮತ್ತೆ ಕ್ಯಾತೆ ತೆಗೆದಿದೆ. ಉಭಯ ದೇಶಗಳ ಎರಡೂ ಕಡೆಯ ಸೇನಾ ಮುಖ್ಯಸ್ಥರ ನಾಲ್ಕನೇ ಸುತ್ತಿನ ಮಾತುಕತೆಯ ನಂತರ ಎಲ್ಎಸಿಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದ ಚೀನಾ, ಕೊಟ್ಟ ಮಾತನ್ನು ತಪ್ಪಿದೆ.
ಸಂಪೂರ್ಣವಾಗಿ ಪೂರ್ವ ಲಡಾಕ್‌ನಲ್ಲಿ ಚೀನಾ ಸೈನಿಕರು ನಿರ್ಗಮಿಸದ ಕಾರಣ ಎರಡೂ ಸೇನೆಗಳ ನಡುವೆ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಹೀಗಾಗಿ, ಮುಂದಾಗುವ ಅನಾಹುತಗಳಿಗೆ ಚೀನಾಗೆ ದಿಟ್ಟ ಉತ್ತರ ನೀಡಲು ಅಧಿಕ ಸೇನೆಯನ್ನು ಭಾರತೀಯ ಸೇನೆ ರವಾನಿಸಿದೆ. ಎತ್ತರದ ಪ್ರದೇಶಕ್ಕೆ ದೀರ್ಘ ಪ್ರಯಾಣ ಬೆಳೆಸಿ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದೆ.
ಶಾಂತಿ ಮರುಸ್ಥಾಪನೆಗೆ ಜುಲೈ 14ರಂದು ನಡೆದಿದ್ದ ಸೇನಾ ಕಮಾಂಡರ್ ಮಟ್ಟದ ಸಭೆಯಲ್ಲಿ ಕೈಗೊಂಡ ಪ್ರಕಾರ, ಎಲ್‌ಎಸಿಯ ಸರೋವರದಿಂದ 2 ಕಿ.ಮೀ ದೂರ ಎರಡೂ ಕಡೆಯ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವುದು ಮತ್ತು ಅಲ್ಲಿನ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರುವುದು.
ಆದರೆ, ಕೆಲವು ಘರ್ಷಣೆ ಪ್ರದೇಶಗಳು ಇನ್ನೂ ಚಂಚಲವಾಗಿಯೇ ಇವೆ. ಗಸ್ತು ತಿರುಗುವ ಪಾಯಿಂಟ್‌ಗಳ ಬಳಿ ಚೀನಾ ಸೈನಿಕರು ಇನ್ನೂ ಇದ್ದಾರೆ. ಚೀನಾ ಮಾತ್ರ ತನ್ನ ಸೈನಿಕರಿಗೆ ಸಾಕಷ್ಟು ಪಡಿತರ ಸೇರಿದಂತೆ ಹಲವು ಸರಕುಗಳನ್ನು ಸರಬರಾಜು ಮಾಡುತ್ತಿದೆ.
ಭಾರತೀಯ ಸೈನಿಕರ ನಿಯಂತ್ರಣದಲ್ಲಿದ್ದ ಫಿಂಗರ್-4 ಗಸ್ತು ಪ್ರದೇಶಗಳು ಖಾಲಿಯಾಗಿವೆ ಎಂದುಕೊಳ್ಳಲಾಗಿತ್ತು. ಆದರೆ, 8 ಕಿ.ಮೀ ದೂರದಲ್ಲಿರುವ ಭಾರತೀಯ ಭೂಪ್ರದೇಶಕ್ಕೆ ಬಂದು ಚೀನಾ ಸೈನಿಕರು ಅಲ್ಲಿ ಕ್ಯಾಂಪಿಂಗ್ ಮಾಡುತ್ತಿದೆ. ಈ ಮೂಲಕ ಚೀನಾ ಬೆದರಿಸುವ ತಂತ್ರ ಹೆಣೆಯುತ್ತಿದೆ. ಹೀಗಾಗಿ, ಭಾರತೀಯ ಸೇನೆವೂ ಸಹ ಅಲ್ಲಿಗೆ ಪ್ರಯಾಣ ಬೆಳೆಸಿದೆ.
ಪಾಟ್ರೋಲಿಂಗ್ ಪಾಯಿಂಟ್-14 ಎಂದು ಕರೆಯಲ್ಪಡುವ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಅಂತರ ಮೂರು ಕಿ.ಮೀ., ಪಾಟ್ರೋಲಿಂಗ್ ಪಾಯಿಂಟ್-15ರ ಸೈನ್ಯಗಳ ನಡುವಿನ ಅಂತರ ಸುಮಾರು 8 ಕಿ.ಮೀ. ಇದೆ. ಆದರೆ, ಪಾಯಿಂಟ್-17ರ 600-800 ಮೀಟರ್ ದೂರದಲ್ಲಿ 40-50 ಚೀನಾ ಸೈನಿಕರು ಗಸ್ತು ತಿರುಗುತ್ತಿದ್ದಾರೆ.