ನವದೆಹಲಿ: ನೇಪಾಳದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳ ಪ್ರಗತಿಯ ಬಗ್ಗೆ ಮಾಹಿತಿ ಪಡೆಯಲು ಭಾರತ ಮತ್ತು ನೇಪಾಳದ ಉನ್ನತಾಧಿಕಾರಿಗಳು ಸೋಮವಾರ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚರ್ಚೆ ನಡೆಸುವ ನಿರೀಕ್ಷೆಯಿದೆ.
ನೇಪಾಳದ ಭಾರತೀಯ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಹಾಗೂ ನೇಪಾಳದ ವಿದೇಶಾಂಗ ಕಾರ್ಯದರ್ಶಿ ಶಂಕರ್ ದಾಸ್ ಬೈರಗಿ ಮಾತುಕತೆ ನಡೆಸಲಿದ್ದಾರೆ. ನೇಪಾಳ ಸರ್ಕಾರವು ಭಾರತೀಯ ಭೂ ಪ್ರದೇಶದ ಕೆಲವು ಭಾಗಗಳನ್ನು ಒಳಗೊಂಡ ಹೊಸ ನಕ್ಷೆಯನ್ನು ಬಿಡುಗಡೆ ಮಾಡಿದ ನಂತರ ಉಭಯ ದೇಶಗಳ ನಡುವಿನ ಸಂಬಂಧಗಳು ಬಿಗಡಾಯಿಸಿತ್ತು. ಆ ಬಳಿಕ ನಡೆಯುತ್ತಿರುವ ಮೊದಲ ಉನ್ನತ ಮಟ್ಟದ ಸಭೆ ಇದಾಗಿದೆ. ನೇಪಾಳದ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಭಾರತ ಸಹಕಾರವನ್ನು ನೀಡುತ್ತಿದೆ. ಈ ಕುರಿತು ಮಾಹಿತಿ ಪಡೆಯುವ ಸಲುವಾಗಿ ಉಭಯ ದೇಶಗಳ ನಾಯಕರ ನಡುವೆ ಚರ್ಚೆ ನಡೆಯಲಿದೆ ಎನ್ನಲಾಗಿದೆ.
ನೇಪಾಳದಲ್ಲಿ ಶಿಕ್ಷಣ, ಆರೋಗ್ಯ, ಸಂಪರ್ಕ, ಕುಡಿಯುವ ನೀರು, ನೈರ್ಮಲ್ಯ, ವೃತ್ತಿಪರ ತರಬೇತಿ, ವೈದ್ಯಕೀಯ ಕ್ಯಾಂಪಸ್ ಮುಂತಾದ ಕ್ಷೇತ್ರಗಳ ಅಭಿವೃದ್ದಿಗೆ ಭಾರತ ಸಹಾಯ ನೀಡುತ್ತಿದೆ. 2003 ರಿಂದ ಭಾರತ 422 ಹೈ ಇಂಪ್ಯಾಕ್ಟ್ ಸಮುದಾಯ ಅಭಿವೃದ್ಧಿ ಯೋಜನೆಗಳನ್ನು (ಹೆಚ್‌ಐಸಿಡಿಪಿಗಳು) ಪೂರ್ಣಗೊಳಿಸಿದೆ. ಸುಮಾರು 798.7 ಕೋಟಿ ರೂ. ಧನ ಸಹಾಯವನ್ನು ಭಾರತ ನೀಡುತ್ತಿದ್ದು, ಅಭಿವೃದ್ದಿ ಯೋಜನೆಗಳಲ್ಲಿ ನೇಪಾಳದ 77 ಜಿಲ್ಲೆಗಳು ಒಳಗೊಂಡಿದೆ ಎಂದು ಕಠ್ಮಂಡುವಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಭಾರತದ 74 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಿ ಪಿ.ಪಿ.ಶರ್ಮಾ ಒಲಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದರು.
ನೇಪಾಳದ ಪ್ರಧಾನಿ ಕೂಡ ಭಾರತದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸರ್ಕಾರ ಮತ್ತು ದೇಶದ ಜನರಿಗೆ ಶುಭಾಶಯ ಕೋರಿದ್ದರು ಮತ್ತು ಯುಎನ್ ಭದ್ರತಾ ಮಂಡಳಿಯ ಚುನಾವಣೆಗೆ ಭದ್ರತಾ ಸ್ಪರ್ಧಿಸಿದ್ದಕ್ಕೆ ಅಭಿನಂದನೆ ತಿಳಿಸಿದ್ದರು. ಅಲ್ಲದೇ, ನೆರೆಹೊರೆಯ ರಾಷ್ಟ್ರಗಳಿಗೆ ಆದ್ಯತೆ ನೀಡಲಾಗುತ್ತದೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಸ್ವಾತಂತ್ರ್ಯೋತ್ಸವ ಭಾಷಣವನ್ನು ಕೂಡ ಒಲಿ ಶ್ಲಾಘಿಸಿದ್ದರು. ನೇಪಾಳ ಪ್ರಧಾನಿ ಅರ್ಥಪೂರ್ಣ ದ್ವಿಪಕ್ಷೀಯ ಸಹಕಾರವನ್ನು ಎದುರು ನೋಡುತ್ತಿದ್ದಾರೆ ಎಂದು ನೇಪಾಳದ ಉನ್ನತ ಮೂಲಗಳು ತಿಳಿಸಿವೆ.
ಭಾರತದ ಭೂಪ್ರದೇಶಗಳಾದ ಕಾಲಾಪಾನಿ, ಲಿಪುಲೇಖ್ ಮತ್ತು ಲಿಂಪಿಯಾಧುರಾಗಳನ್ನು ಒಳಗೊಂಡ ಹೊಸ ನಕ್ಷೆಯನ್ನು ಮೇನಲ್ಲಿ ನೇಪಾಳ ಸರ್ಕಾರ ಬಿಡುಗಡೆ ಮಾಡಿದ ಬಳಿಕ ಭಾರತ ಮತ್ತು ನೇಪಾಳ ನಡುವೆ ಉದ್ವಿಗ್ನ ವಾತಾವರಣ ಉಂಟಾಗಿತ್ತು. ನೇಪಾಳದ ಉದ್ದಟತನಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿತ್ತು.