ನವದೆಹಲಿ: ಹೈಡ್ರಾಕ್ಸಿಕ್ಲೋರೋಕ್ವಿನ್ ಕೊರೊನಾಗೆ ರಾಮಬಾಣ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ಈ ಔಷಧಿ ರಫ್ತು ಮಾಡಿಕೊಳ್ಳಲು ಅನೇಕ ದೇಶಗಳು ಭಾರತದ ಹಿಂದೆ ದುಂಬಾಲು ಬಿದ್ದಿದ್ದವು. ವಿಶ್ವದ ದೊಡ್ಡಣ್ಣ ಅಮೆರಿಕ ಕೂಡ ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಜತೆ ಮಾತುಕತೆ ನಡೆಸಿದ್ದರು.
ಭಾರತ ಒಂದು ವೇಳೆ ಅಮೆರಿಕಕ್ಕೆ ಮಲೇರಿಯಾ ನಿರೋಧಕ ಔಷಧವಾದ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ತುರ್ತಾಗಿ ಕಳುಹಿಸಿ ಕೊಡದೇ ಇದ್ದರೆ 'ಪ್ರತೀಕಾರ' ತೀರಿಸಿಕೊಳ್ಳುವ ಬಗ್ಗೆ ಟ್ರಂಪ್ ಮಾತನಾಡಿದ್ದರು. ಇದೀಗ ಮಾನವೀಯತೆ ಆಧಾರದ ಮೇಲೆ ಕೆಲವೊಂದು ದೇಶಗಳಲ್ಲಿ ಈ ಔಷಧಿ ರಫ್ತು ಮಾಡಲು ನಿರ್ಧರಿಸಿರುವುದಾಗಿ ಭಾರತದ ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಹೈಡ್ರಾಕ್ಸಿಕ್ಲೋರೋಕ್ವಿನ್ ಪೂರೈಕೆಗೆ ಒತ್ತಡ: ಭಾರತಕ್ಕೆ 'ಪ್ರತೀಕಾರ'ದ ಎಚ್ಚರಿಕೆ ನೀಡಿದ ಟ್ರಂಪ್
ಕೊರೊನಾ ಸಾಂಕ್ರಾಮಿಕ ರೋಗದಿಂದ ವಿಶ್ವದ ಹಲವು ದೇಶಗಳು ತತ್ತರಿಸಿ ಹೋಗಿವೆ. ಈ ಅಂಶ ಗಮನದಲ್ಲಿಟ್ಟುಕೊಂಡು ನಾವು ನೆರೆಯ ರಾಷ್ಟ್ರಗಳಿಗೆ ಪ್ಯಾರಸಿಟಮಾಲ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ಸೇರಿ 24 ಔಷಧಗಳ ರಫ್ತಿನ ಮೇಲೆ ಹೇರಿದ್ದ ನಿಷೇಧವನ್ನು ಭಾಗಶ: ತೆರವುಗೊಳಿಸುತ್ತಿರುವುದಾಗಿ ಹೇಳಿದೆ.
ಈ ಹಿಂದೆ ಶ್ರೀಲಂಕಾ ಮತ್ತು ನೇಪಾಳ ದೇಶಗಳು ಈ ಔಷಧಿ ರಫ್ತು ಮಾಡುವಂತೆ ಮನವಿ ಮಾಡಿಕೊಂಡಿದ್ದವು.
ಹೆಚ್ಚು ಹಾನಿಗೊಳಗಾದ ಕೆಲವು ರಾಷ್ಟ್ರಗಳಿಗೆ ನಾವು ಈ ಅಗತ್ಯ ಔಷಧಿ ಪೂರೈಸಲು ನಿರ್ಧರಿಸಿದ್ದು, ಇದನ್ನು ರಾಜಕೀಯಗೊಳಿಸಲು ಸಿದ್ಧರಿಲ್ಲ ಎಂದು ಭಾರತ ಹೇಳಿದೆ.