ನವದೆಹಲಿ : ದೇಶದ ಕೊರೊನಾ ಪ್ರಕರಣಗಳ ಸಂಖ್ಯೆ 50 ಸಾವಿರದ ಗಡಿ ದಾಟಿದೆ. ಈವರೆಗೂ ಭಾರತದ ಕೊರೊನಾ ಕೇಸ್ಗಳ ಒಟ್ಟು ಸಂಖ್ಯೆ 52,952ಕ್ಕೇರಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ ಈವರೆಗೆ ದೇಶದಲ್ಲಿ ಒಟ್ಟು 1,783 ಜನ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ 35,902 ಜನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 15,266 ಜನ ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸೋಂಕಿತರ ಸಂಖ್ಯೆ ಇದೆ. ರಾಜ್ಯದ ಸೋಂಕಿತರ ಸಂಖ್ಯೆ 16,758ಕ್ಕೇರಿದೆ. ಈವರೆಗೆ ಇಲ್ಲಿ 651 ಜನ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಹೆಚ್ಚು ಸೋಂಕಿತರು ಹಾಗೂ ಸಾವನ್ನಪ್ಪಿದವರಲ್ಲಿ ಮಹಾರಾಷ್ಟ್ರಕ್ಕೆ ಅಗ್ರಸ್ಥಾನ. ಉಳಿದಂತೆ ಗುಜರಾತ್ನಲ್ಲಿ 6625, ದೆಹಲಿ 5532, ತಮಿಳುನಾಡು 4829 ಹಾಗೂ ರಾಜಸ್ಥಾನದಲ್ಲಿ ಒಟ್ಟು 3317 ಕೊರೊನಾ ಪ್ರಕರಣ ವರದಿಯಾಗಿವೆ.
ಕಳೆದ 24 ಗಂಟೆಗಳಲ್ಲಿ 1084 ಜನ ಗುಣಮುಖ : ಇನ್ನೊಂದೆಡೆ ದೇಶದಲ್ಲಿ ಕಳೆದೊಂದು ದಿನದಿಂದ 1084 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದು ಈವರೆಗಿನ 2ನೇ ಅತಿ ಹೆಚ್ಚು ಒಂದೇ ದಿನದ ಗುಣಮುಖರ ಸಂಖ್ಯೆ. ನಿನ್ನೆ ಒಟ್ಟು 1456 ಜನ ದೇಶಾದ್ಯಂತ ಸೋಂಕಿನಿಂದ ಮುಕ್ತರಾಗಿದ್ದರು.