ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದರ ಕುರಿತಾಗಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ರಿಸರ್ಚ್ ಕೈಗೊಂಡ 'ನ್ಯಾಷನಲ್ ಸಿರೋಸರ್ವೇ' ಎಂಬ ಸಂಶೋಧನೆಯೊಂದರ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಅಚ್ಚರಿ ಮೂಡಿಸುತ್ತಿದೆ.
'ಸಿರೋಸರ್ವೇ'ಯ ಮಾಹಿತಿ ಜರ್ನಲ್ ಆಫ್ ಮೆಡಿಕಲ್ ರಿಸರ್ಚ್ನಲ್ಲಿ ಪ್ರಕಟವಾಗಿದ್ದು, ಇದರ ಪ್ರಕಾರ ದೇಶದಲ್ಲಿ ಶೇಕಡಾ 0.73ರಷ್ಟು ಮಂದಿ ಯುವಕರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ ಎಂಬ ಮಾಹಿತಿ ಹೊರ ಬಂದಿದೆ.
ಅಷ್ಟೇ ಅಲ್ಲದೇ ಮೇ ತಿಂಗಳಲ್ಲಿ ಸುಮಾರು 64 ಲಕ್ಷ ಮಂದಿಗೆ ಸೋಂಕು ತಗುಲಿತ್ತು ಎಂಬ ಅಚ್ಚರಿಯ ಅಂಕಿ-ಅಂಶಗಳನ್ನು ಬಹಿರಂಗಪಡಿಸಿದೆ.
ಮೇ 11ರಿಂದ ಜೂನ್ 4ರವರೆಗೆ ಐಸಿಎಂಆರ್ ಸಮೀಕ್ಷೆ ನಡೆಸಿದ್ದು, 28 ಸಾವಿರ ಮಂದಿಯ ರಕ್ತದ ಮಾದರಿಗಳಲ್ಲಿ ಕೊರೊನಾ ರೋಗ ನಿರೋಧಕ ಶಕ್ತಿ ಪತ್ತೆಯಾಗಿರುವುದು ಕಂಡು ಬಂದಿದೆ. ಈ ಮೂಲಕ ಅವರನ್ನು ಈಗಾಗಲೇ ಕೊರೊನಾ ಸೋಂಕು ಆವರಿಸಿ, ಗುಣವಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.
ಸಂಶೋಧನೆಯಲ್ಲಿ 18ರಿಂದ 45ರೊಳಗಿನ ವಯಸ್ಸಿನ ಶೇಕಡಾ 43.3ರಷ್ಟು ಮಂದಿಗೆ, 46ರಿಂದ 60ರೊಳಗಿನ ವಯಸ್ಸಿನ ಶೇಕಡಾ 39.5ರಷ್ಟು ಮಂದಿಗೆ, 60 ವರ್ಷ ಮೇಲ್ಪಟ್ಟ ಶೇಕಡಾ 17.2ರಷ್ಟು ಮಂದಿಗೆ ರಕ್ತದ ಪರೀಕ್ಷೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಇದರಿಂದಾಗಿ ಶೇಕಡಾ 1ರಷ್ಟು ಮಾತ್ರ ಯುವಕರಿಗೆ ಕೊರೊನಾ ಸೋಂಕು ಇರುವುದು ದೃಢಪಡುತ್ತಿದೆ. ಉಳಿದವರೆಲ್ಲರೂ ತಮ್ಮ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡು ಸೋಂಕಿನಿಂದ ಗುಣವಾಗುತ್ತಿದ್ದಾರೆ ಎಂಬ ಅಂಶಗಳು ಬೆಳಕಿಗೆ ಬಂದಿವೆ.
ಭಾರತದ ಜನಸಂಖ್ಯೆಯ ಬಹುಭಾಗದಲ್ಲಿ ಕೊರೊನಾ ಸೋಂಕು ಆವರಿಸಿದೆ ಎಂಬುದನ್ನು ಹಲವು ಜಿಲ್ಲೆಗಳಲ್ಲಿ ಗಮನಿಸಿದಾಗ ಕಂಡು ಬಂದಿದೆ ಎಂದು ವರದಿ ಹೇಳಿದೆ.
ಈಗಲೂ ಕೊರೊನಾ ನಿಯಂತ್ರಣಕ್ಕೆ ಹಲವಾರು ಕ್ರಮಗಳನ್ನು ಮುಂದುವರೆಸಬೇಕೆಂದು ಹೇಳಿರುವ ಸಂಶೋಧನೆ, ನಗರದ ಕೊಳಗೇರಿ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಪುರುಷರಲ್ಲಿ ಅತಿ ಹೆಚ್ಚಾಗಿ ಸೋಂಕು ತಗುಲುತ್ತದೆ ಎಂದು ಎಚ್ಚರಿಕೆ ನೀಡಿದೆ.
ಕೆಲವು ಜಿಲ್ಲೆಗಳಲ್ಲಿ ಏಪ್ರಿಲ್ 25ರವರೆಗಿನ ಅಂಕಿ-ಅಂಶಗಳನ್ನು ಪರಿಶೀಲಿಸಿರುವ ಐಸಿಎಂಆರ್, 15 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ, 22 ಜಿಲ್ಲೆಗಳಲ್ಲಿ ಕಡಿಮೆ ಪ್ರಕರಣ, 16 ಜಿಲ್ಲೆಗಳಲ್ಲಿ ಮಧ್ಯಮ ಪ್ರಕರಣಗಳು, ಹಾಗೂ 17 ಜಿಲ್ಲೆಗಳಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದಿವೆ ಎಂದು ಐಸಿಎಂಆರ್ ವರ್ಗೀಕರಿಸಿದೆ.