ನವದೆಹಲಿ: ಭಾರತ-ಚೀನಾ ಗಡಿ ಪ್ರದೇಶದ 3 ದಿನಗಳ ಪ್ರವಾಸ ಕೈಗೊಂಡಿರುವ ಸೇನಾ ಮುಖ್ಯಸ್ಥ ಎಂ.ಎಂ.ನರವಣೆ ಚಮೋಲಿ ಜಿಲ್ಲೆಯ ರಿಮ್‌ಖೀಮ್, ನಿತಿ ಹಾಗೂ ಲ್ಯಾಪ್ಟಾಲ್ ಗಡಿ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಇದೀಗ ಭಾರತ,ಚೀನಾ ಗಡಿ ಭಾಗವಾದ ಎಲ್ಎಸಿಯ ಉದ್ದಗಲಕ್ಕೂ ಘರ್ಷಣೆಯ ಭಾಗವಾಗಿದ್ದ ಕೇಂದ್ರಗಳಲ್ಲಿ ಸೇನಾ ಚಟುವಟಿಕೆಗಳನ್ನ ನಿಲ್ಲಿಸಲು ಉಭಯ ದೇಶಗಳು ಒಪ್ಪಿವೆ.
ಭಾರತ ಮತ್ತು ಚೀನಾ ಕಳೆದ ವಾರ ಚುಶುಲ್‌ನಲ್ಲಿ ನಡೆದ 8ನೇ ಸುತ್ತಿನ ಭಾರತ-ಚೀನಾ ಹಿರಿಯ ಮಿಲಿಟರಿ ಕಮಾಂಡರ್‌ಗಳ ಮಾತುಕತೆಯ ಸಂದರ್ಭದಲ್ಲಿ ಲಡಾಖ್ನ ವಾಸ್ತವ ನಿಯಂತ್ರಣ ಗಡಿರೇಖೆಯ ಉದ್ದಕ್ಕೂ ಇರುವ ಉಭಯ ಸೇನೆಯನ್ನು ಹಿಂಪಡೆಯುವ ಕುರಿತು ಮಾತುಕತೆ ನಡೆಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ಕುರಿತು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ಮಾಹಿತಿ ನೀಡಿದ್ದು, ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂವಾದ ನಡೆಸಲು ಹಾಗೂ ಬಾಕಿ ಇರುವ ಇತರೆ ಸಮಸ್ಯೆಗಳ ಇತ್ಯರ್ಥಕ್ಕೆ ಒತ್ತಾಯಿಸಿ ಸಂವಾದ ನಡೆಸಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ. ಅಲ್ಲದೆ ಮತ್ತೊಂದು ಸುತ್ತಿನ ಸಭೆ ನಡೆಸಲು ಉಭಯ ಪಕ್ಷಗಳು ಒಪ್ಪಿಕೊಂಡಿವೆ ಎಂದಿದ್ದಾರೆ.
ಭಾರತ-ಚೀನಾ ಗಡಿಯ ಪಶ್ಚಿಮ ವಲಯದಲ್ಲಿ ಎಲ್ಎಸಿಯ ಉದ್ದಕ್ಕೂ ಎರಡು ಸೇನೆಯನ್ನು ಹಿಂಪಡೆಯುವ ಕುರಿತು ಮಾತುಕತೆ ವಿನಿಮಯವಾಗಿದೆ. ಭಾರತ ಮತ್ತು ಚೀನಾ ಮಿಲಿಟರಿ, ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂವಾದ ಮತ್ತು ಸಂವಹನವನ್ನು ಕಾಪಾಡಿಕೊಳ್ಳಲು ಒಪ್ಪಿಕೊಂಡಿವೆ. ಮತ್ತು ಹಿರಿಯ ಕಮಾಂಡರ್‌ಗಳ ಈ ಸಭೆಯಲ್ಲಿ ಚರ್ಚೆ ಮುಂದಿಡಲಾಗಿದೆ ಎಂದಿದ್ದಾರೆ.
ಕಮಾಂಡರ್ ಮಟ್ಟದ ಮಾತುಕತೆಯ ಸಂದರ್ಭದಲ್ಲಿ ಎರಡೂ ಕಡೆಯವರ ನಡುವೆ ಸೇನೆ ಹಿಂಪಡೆಯುವ ಯೋಜನೆ ಕುರಿತು ಚರ್ಚಿಸಲಾಯಿತು. ಅಲ್ಲದೆ ಈ ವರ್ಷದ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಉಂಟಾಗಿದ್ದ ಪಾಂಗೋಗ್ ಸರೋವರ ಪ್ರದೇಶದ ಸ್ಟ್ಯಾಂಡ್ ಆಫ್ ವೇಳೆ ಉದ್ಭವಿಸಿದ ಹೊಸ ರಚನೆಗಳಿದ್ದರೆ ಅಂತಹದನ್ನು ತೆರವು ಮಾಡಲು ಉಭಯ ದೇಶಗಳು ಸಮ್ಮತಿಸಿವೆ ಎಂದು ಮಾಹಿತಿ ನೀಡಿದ್ದಾರೆ.
ಪೂರ್ವ ಲಡಾಖ್ ವಲಯದ ಕೆಲವು ಭಾಗಗಳಿಂದ ಹಂತ ಹಂತವಾಗಿ ಸೇನೆ ಹಿಂಪಡೆಯುವ ಬಗ್ಗೆ ಚರ್ಚಿಸಲು ಉಭಯ ದೇಶದ ಸೇನೆಗಳು ಒಪ್ಪಂದಕ್ಕೆ ಬಂದಿರುವುದರಿಂದ ಈ ಪ್ರಸ್ತಾಪಗಳನ್ನು ಚರ್ಚಿಸಲಾಗುತ್ತಿದೆ.