ನವದೆಹಲಿ: ಭಾರತೀಯ ಮೂಲದ ಕುಲಭೂಷಣ್ ಜಾಧವ್ ಮರುಪರಿಶೀಲನಾ ಅರ್ಜಿ ಸಲ್ಲಿಕೆಗೆ ನಿರಾಕರಿಸಿದ್ದಾರೆ ಎಂದು ಪಾಕಿಸ್ತಾನ ಹೇಳಿಕೊಂಡ ಬೆನ್ನಲ್ಲೇ ಯಾವುದೇ ಷರತ್ತು ಹಾಕದೆ ಜಾಧವ್‌ಗೆ ಅರ್ಜಿ ಸಲ್ಲಿಸಲು ಕಾನ್ಸುಲರ್ ಭೇಟಿಗೆ ಮುಕ್ತ ಅವಕಾಶ ನೀಡಬೇಕೆಂದು ಪಾಕಿಸ್ತಾನಕ್ಕೆ ಭಾರತ ಸೂಚಿಸಿದೆ.
ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯಾಗಿದ್ದ ಜಾಧವ್‌ಗೆ 2017ರ ಏಪ್ರಿಲ್‌ನಲ್ಲಿ ಬೇಹುಗಾರಿಕೆ ಹಾಗೂ ಭಯೋತ್ಪಾದನೆ ಆಪಾದನೆಯ ಮೇಲೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಇದನ್ನು ವಿರೋಧಿಸಿರುವ ಭಾರತ ಐಸಿಜೆ (ಅಂತಾರಾಷ್ಟ್ರೀಯ ನ್ಯಾಯಾಲಯ) ಮೂಲಕ ಗಲ್ಲಿಗೇರಿಸುವುದನ್ನು ತಡೆದಿತ್ತು.
ಕಳೆದ ವರ್ಷ ಜುಲೈನಲ್ಲಿ ಹೇಗ್ ಮೂಲದ ನ್ಯಾಯಾಲಯ ಪಾಕಿಸ್ತಾನವು ಜಾಧವ್‌ಗೆ ಶಿಕ್ಷೆ ವಿಧಿಸುವ ಕುರಿತು ಮರುಪರಿಶೀಲನೆ ಮಾಡಿ, ಕಾನ್ಸುಲರ್ ಭೇಟಿಗೆ ಪ್ರವೇಶ ನೀಡಬೇಕೆಂದು ತೀರ್ಪು ನೀಡಿತ್ತು. ಆದರೆ ಮರುಪರಿಶೀಲನಾ ಅರ್ಜಿ ಸಲ್ಲಿಕೆಗೆ ಜಾಧವ್ ನಿರಾಕರಿಸಿದ್ದಾರೆ ಎಂದು ಕಳೆದ ವಾರ ಪಾಕಿಸ್ತಾನ ಹೇಳಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಭಾರತ, ಪಾಕಿಸ್ತಾನವು ಈ ವಿಚಾರದಲ್ಲಿ ನಾಟಕವಾಡುತ್ತಿದೆ. ಬಲವಂತವಾಗಿ ಜಾಧವ್ರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿದೆ ಎಂದು ಆರೋಪಿಸಿದ್ದು, ಯಾವುದೇ ಷರತ್ತು ವಿಧಿಸದೆ ಜಾಧವ್‌ಗೆ ಅರ್ಜಿ ಸಲ್ಲಿಸಲು ಕಾನ್ಸುಲರ್ ಭೇಟಿಗೆ ಅವಕಾಶ ನೀಡಬೇಕೆಂದು ಕೇಳಿದೆ.
ಪ್ರಕರಣ ಸಂಬಂಧ ನಾವು ಕಾನೂನು ಆಯ್ಕೆಗಳನ್ನು ಹುಡುಕುತ್ತಿದ್ದು, ಭಾರತೀಯನ ರಕ್ಷಣೆಗೆ ನಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಹೇಳಿದ್ದಾರೆ.