ನವದೆಹಲಿ: ಭಾರತೀಯ ರೈಲ್ವೆಯ ಭವಿಷ್ಯದ ಪ್ರಯಾಣಿಕರಿಗೆ ರೈಲ್ವೆ ಇಲಾಖೆಯು ಸಿಹಿ ಸುದ್ದಿ ನೀಡಿದೆ. ರೈಲುಗಳ ವೇಗವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಹೊಸ ಯೋಜನೆಗಳನ್ನು ರೂಪಿಸಲಾಗಿದೆ ಅನ್ನೋದು ಮೂಲಗಳಿಂದ ತಿಳಿದು ಬಂದಿದೆ.
ಹೌದು, ಎಲ್ಲಾ 64 ರಾಜಧಾನಿ ಮತ್ತು ಶತಾಬ್ದಿ ರೈಲುಗಳ ಎರಡೂ ತುದಿಗಳಲ್ಲಿ ಎರಡು ಲೋಕೋಮೋಟಿವ್‌ಗಳನ್ನು ಜೋಡಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿರುವ ಈ ಯೋಜನೆಯು ಪ್ರಯಾಣಿಕರ ಪ್ರಯಾಣದ ಸಮಯವನ್ನು 90 ನಿಮಿಷಗಳವರೆಗೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಭಾರತೀಯ ರೈಲ್ವೆ ರೂಪಿಸಿದ ನೀಲನಕ್ಷೆಯ ಪ್ರಕಾರ, 2024 ರ ವೇಳೆಗೆ ಮುಂಬೈ ಉಪನಗರಗಳಲ್ಲಿ ಕಾರ್ಯನಿರ್ವಹಿಸುವ ಪ್ರತಿ ರೈಲಿಗೆ ಇನ್ನೂ ಹೆಚ್ಚಿನ ಮೂರು ಬೋಗಿಗಳನ್ನು ಸೇರಿಸಲಾಗುವುದು ಹಾಗೂ ಈ ಅವಧಿಯಲ್ಲಿ ಸುಮಾರು 100 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪರಿಚಯಿಸಲು ರೈಲ್ವೆ ಇಲಾಖೆ ಯೋಜಿಸಿದೆ. ಈ ಯೋಜನೆಯು ನರೇಂದ್ರ ಮೋದಿ ಸರ್ಕಾರದ ಆದ್ಯತೆಯಾಗಿದೆ.
ಸದ್ಯ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಉತ್ಪಾದನೆ ಸ್ಥಗಿತಗೊಂಡಿದ್ದರೂ, ಮುಂದಿನ ದಿನಗಳಲ್ಲಿ 40 ಹೊಸ ರೈಲುಗಳಿಗೆ ಶೀಘ್ರದಲ್ಲೇ ಹೊಸ ಟೆಂಡರ್‌ಗಳನ್ನು ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಿಂದ ಪ್ರಸ್ತುತವಿರುವ ಸರಕು ಸಾಗಣೆ ರೈಲುಗಳ ಸರಾಸರಿ ವೇಗವನ್ನು 24 ಕಿ.ಮೀ.ನಿಂದ ಕನಿಷ್ಠ 45 ಕಿ.ಮೀ. ವೇಗಕ್ಕೆ ಮತ್ತು ಪ್ರಯಾಣಿಕರ ರೈಲುಗಳ ವೇಗವನ್ನು 60 ಕಿ.ಮೀ. ನಿಂದ 80 ಕಿ.ಮೀ.ಗೆ ಹೆಚ್ಚಿಸಲು ಗುರಿಯನ್ನು ರೈಲ್ವೆ ಹೊಂದಿದೆ.
"ಟ್ರ್ಯಾಕ್ಗಳ ನವೀಕರಣದ ಕಾರ್ಯಗಳನ್ನು ದೊಡ್ಡ ಮಟ್ಟದಲ್ಲಿ ಕೈಗೊಂಡಿರುವುದರಿಂದ ಪ್ರಯಾಣಿಕರು ಮತ್ತು ಸರಕುಗಳನ್ನು ಸಾಗಿಸುವ ರೈಲುಗಳನ್ನು ಬೇರ್ಪಡಿಸುವುದು ಸಾಧ್ಯವಾಗುತ್ತದೆ. ಸರಕುಗಳಿಗೆಂದೆ ಮೀಸಲಾದ ಕಾರಿಡಾರ್‌ಗಳನ್ನು ಪೂರ್ಣಗೊಳಿಸುವುದು ಮತ್ತು ಅಸ್ತಿತ್ವದಲ್ಲಿರುವ ಕಾರಿಡಾರ್‌ಗಳನ್ನು ಮೂರು ಪಟ್ಟು ಹೆಚ್ಚಿಸುವುದರಿಂದ ಸಂಚಾರ ಹರಿವು ಸುಧಾರಿಸುತ್ತದೆ" ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.