ನವದೆಹಲಿ: ಕೊರೊನಾ ವೈರಸ್ನಿಂದಾಗಿ ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಣೆ ಮಾಡಲಾಗಿದ್ದು, ಈ ಮಧ್ಯೆ ಆರೋಗ್ಯ ಇಲಾಖೆಯ ವೃತ್ತಿಪರರ ಬಗ್ಗೆ ನಿಂದನೀಯ ವರ್ತನೆ ತೋರುತ್ತಿರುವ ಜನರ ಬಗ್ಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಬೇಸರ ವ್ಯಕ್ತಪಡಿಸಿದ್ದು, ಬುಧವಾರಂದು 'ಕಪ್ಪು ದಿನ' ಎಂದು ಪರಿಗಣಿಸಿ ಪ್ರತಿಭಟನೆ ನಡೆಸಲು ಕರೆ ನೀಡಿದೆ.
ಆರೋಗ್ಯ ಇಲಾಖೆ ಸಿಬ್ಬಂದಿಗಳ ಪ್ರತಿಭಟನೆ ಮತ್ತು ಜನರಿಗೆ ಜಾಗರೂಕತೆಯ ಸಂಕೇತವಾಗಿ ಆಸ್ಪತ್ರೆಯ ಆವರಣದಲ್ಲಿ ಮೇಣದಬತ್ತಿಗಳನ್ನು ಬೆಳಗಿಸಲು ವಿವಿಧ ಆಸ್ಪತ್ರೆಗಳು ಸೇರಿದಂತೆ ಆರೋಗ್ಯ ಕಾರ್ಯಕರ್ತರಿಗೆ ನಿರ್ದೇಶನ ನೀಡುವಂತೆ ಐಎಂಎ ತನ್ನ ಎಲ್ಲಾ ಪದಾಧಿಕಾರಿಗಳಿಗೆ ಸೋಮವಾರ ಪತ್ರ ಬರೆದಿದೆ.
"ನಮ್ಮ ಬಳಿ ಇರುವ ಬಿಳಿ ಬಣ್ಣ ಎಂದಿಗೂ ಕೆಂಪು ಬಣ್ಣಕ್ಕೆ ತಿರುಗಬಾರದು" ಎಂದು ಐಎಂಎ ಎಚ್ಚರಿಸಿದ್ದು, ಆರೋಗ್ಯ ವೃತ್ತಿಪರರ ರಕ್ಷಣೆಗಾಗಿ ಸುಗ್ರೀವಾಜ್ಞೆಯ ಮೂಲಕ ಕೇಂದ್ರ ಸರ್ಕಾರ ವಿಶೇಷ ಕಾನೂನನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದೆ.
ಈ ಎಚ್ಚರಿಕೆಯ ನಂತರವೂ ವೈದ್ಯರು ಮತ್ತು ಆಸ್ಪತ್ರೆಗಳ ಮೇಲಿನ ಹಿಂಸಾಚಾರದ ಬಗ್ಗೆ ಕೇಂದ್ರ ಸರ್ಕಾರ ಬಿಗಿಯಾದ ಕಾನೂನು ಜಾರಿಗೆ ತರಲು ವಿಫಲವಾದರೆ, ಐಎಂಎ ಗುರುವಾರದಂದು ಕರಾಳ ಕಪ್ಪು ದಿನವನ್ನಾಗಿ ಆಚರಿಸಲಿದೆ ಎಂದು ಎಚ್ಚರಿಕೆ ನೀಡಿದೆ.
ಪ್ರತಿಭಟನೆಯ ಸಂಕೇತವಾಗಿ ದೇಶದಲ್ಲಿನ ಎಲ್ಲಾ ವೈದ್ಯರುಗಳು ಗುರುವಾರದಂದು ಕಪ್ಪು ಬ್ಯಾಡ್ಜ್‌ಗಳನ್ನು ತೊಡಲಿದ್ದಾರೆ ಎಂದು ಸಂಘ ಇದೇ ವೇಳೆ ಸ್ಪಷ್ಟಪಡಿಸಿದೆ.
ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು ಮತ್ತು ಆಸ್ಪತ್ರೆಗಳ ಮೇಲಿನ ದೌರ್ಜನ್ಯದ ವಿರುದ್ಧ ಕೇಂದ್ರ ಸರ್ಕಾರ ವಿಶೇಷ ಕಾನೂನನ್ನು ಸುಗ್ರೀವಾಜ್ಞೆಯ ಮೂಲಕ ತರಬೇಕಿದೆ ಎಂದು ನಾವು ಬಯಸುತ್ತಿದ್ದೇವೆ ಎಂದು ಐಎಂಎ ಗೌರವ ಪ್ರಧಾನ ಕಾರ್ಯದರ್ಶಿ ಡಾ.ಆರ್.ವಿ.ಅಶೋಕನ್ ಹೇಳಿದ್ದಾರೆ.