ಚೆನ್ನೈ: ಕಳೆದ ಮೂರು ದಿನಗಳ ಹಿಂದೆ ಐಐಟಿ ಮದ್ರಾಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸಾವು ಪ್ರಕರಣ ಇದೀಗ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದ್ದು, ವಿದ್ಯಾರ್ಥಿನಿ ಆತ್ಮಹತ್ಯೆಗೆ ಲೈಂಗಿಕ ಕಿರುಕುಳ ಕಾರಣ ಎಂಬ ಆರೋಪ ಕೇಳಿ ಬಂದಿದೆ.
ಐಐಟಿ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿದ್ದ 18 ವರ್ಷದ ವಿದ್ಯಾರ್ಥಿನಿ ಫಾತಿಮಾ ಲತೀಫ್, ಕಳೆದ ಮೂರು ದಿನಗಳ ಹಿಂದೆ ನೇಣಿಗೆ ಶರಣಾಗಿದ್ದಳು. ಆಕೆಯ ಸಾವಿಗೆ ಒಂದು ವಿಷಯದಲ್ಲಿ ಕಡಿಮೆ ಅಂಕ ಪಡೆದುಕೊಂಡಿದ್ದು ಎಂದು ತಿಳಿದು ಬಂದಿತ್ತು. ಆದರೆ ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದರಿಂದ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಆರೋಪ ಕೇಳಿ ಬಂದಿದ್ದು, ಅದಕ್ಕೆ ಪುಷ್ಠಿ ನೀಡುವಂತಹ ಮಹತ್ವದ ದಾಖಲೆ ಆಕೆಯ ಮೊಬೈಲ್ನಲ್ಲಿ ಲಭ್ಯವಾಗಿದೆ.
ಆಕೆ ಮೊಬೈಲ್ನಲ್ಲಿ ಟೈಪ್ ಮಾಡಿರುವ ಮಾಹಿತಿಯೊಂದು ಸಿಕ್ಕಿದ್ದು, ಸದ್ಯ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ.
ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿ ಮಾಡಿರುವ ಪೋಷಕರು ಪ್ರಕರಣದ ವಿಚಾರಣೆ ನಡೆಸಿ, ಆರೋಪಿಗಳಿಗೆ ಶಿಕ್ಷೆ ಒದಗಿಸುವಂತೆ ಒತ್ತಾಯ ಮಾಡಿದ್ದಾರೆ. ಜೊತೆಗೆ ತಮಿಳುನಾಡು ಪೊಲೀಸರ ತನಿಖೆಯಲ್ಲಿ ರಾಜ್ಯ ಸರಕಾರ ಹಸ್ತಕ್ಷೇಪ ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಫಾತಿಮಾ ಲತೀಫ್ ಕೇರಳದ ಕೊಲ್ಲಂ ಮೂಲದವಳಾಗಿದ್ದು, ಶನಿವಾರ ಬೆಳಗ್ಗೆ ಐಐಟಿ ಮದ್ರಾಸ್ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಈ ಮೊದಲು ಆಕೆಯ ಸಾವು ಅಸ್ವಾಭಾವಿಕ ಎಂದು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದರು.