ಭುವನೇಶ್ವರ (ಒಡಿಶಾ): ಐಐಟಿ ಭುವನೇಶ್ವರದ ವಿದ್ಯಾರ್ಥಿಗಳು ಕೋವಿಡ್-19 ರೋಗಿಗಳಿಗೆ ಸಹಾಯ ಮಾಡಲು ಕಡಿಮೆ ವೆಚ್ಚದ ಸಾಧನವೊಂದನ್ನು ಅಭಿವೃದ್ಧಿಪಡಿಸಿದ್ದಾರೆ.
ಅವರು ಹೈಪರ್ಬಾರಿಕ್ ಚೇಂಬರ್ ವಿನ್ಯಾಸಗೊಳಿಸಿದ್ದು, ಉಸಿರಾಟವನ್ನು ಸುಲಭಗೊಳಿಸುವ ವೆಂಟಿಲೇಟರ್ ಇದಾಗಿದೆ. 'ಸ್ವಾಸ್ನರ್' ಎಂಬ ಹೆಸರಿನ ಈ ಸಾಧನ ರೋಗಿಗಳಿಗೆ ಹೆಚ್ಚು ಅನುಕೂಲಕರವಾಗಿ ಉಸಿರಾಡಲು ಅವಕಾಶ ನೀಡಲಿದೆ.
ದೇಶದಲ್ಲಿ ವೆಂಟಿಲೇಟರ್‌ಗಳ ಕೊರತೆಯಿಂದಾಗಿ 'ಸ್ವಾಸ್ನರ್' ಹಲವು ಜೀವಗಳನ್ನು ಉಳಿಸಲು ಸಹಾಯ ಮಾಡಲಿದೆ ಎಂದು ಡೆವಲಪರ್‌ಗಳು ನಂಬಿದ್ದಾರೆ.
ತಲೆಗೆ ಅಳವಡಿಸುವ ಆಕಾರದಲ್ಲಿರುವ ಈ ಸಾಧನವು ಹೈಪರ್ಬಾರಿಕ್ ಆಕ್ಸಿಜನ್ ಚಿಕಿತ್ಸೆಯ ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ. ಇದನ್ನು ಮುಖ್ಯವಾಗಿ ಡೈವಿಂಗ್ ಸಂಬಂಧಿತ ಕಾಯಿಲೆ ಮತ್ತು ಇತರ ವೈದ್ಯಕೀಯ ತೊಡಕುಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
ಈ ಉತ್ಪನ್ನವು ಕೊರೊನಾ ವೈರಸ್ ಮತ್ತು ಇತರ ರೀತಿಯ ಸಾಂಕ್ರಾಮಿಕ ರೋಗಗಳ ವಿರುದ್ಧದ ಯುದ್ಧದಲ್ಲಿ ಲಭ್ಯವಿರುವ ಹಾಗೂ ಅಸ್ತಿತ್ವದಲ್ಲಿರುವ ಸಾಧನಗಳಿಗೆ ಪರ್ಯಾಯವಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.