ನವದೆಹಲಿ: ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಲಾಕ್ಡೌನ್ ಪರಿಹಾರವಲ್ಲ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ಹಾಗಾದರೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳು ಯಾಕೆ ಕೇಂದ್ರ ಸರ್ಕಾರದ ಆದೇಶದ ಮೊದಲೇ ಲಾಕ್ಡೌನ್ ಅವಧಿ ವಿಸ್ತರಿಸಿದವು ಎಂದು ಪ್ರಶ್ನಿಸಿದ್ದಾರೆ.
ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್ ಗಾಂಧಿ, ಕೋವಿಡ್ 19 ಹರಡುವಿಕೆ ತಡೆಗಟ್ಟಲು ಲಾಕ್ಡೌನ್ ಪರಿಹಾರವಲ್ಲ. ಲಾಕ್ಡೌನ್ ಒಂದು ವಿರಾಮದ ಬಟನ್ ಅಷ್ಟೆ. ಇದಕ್ಕೆ ಪರಿಣಾಮಕಾರಿ ಕೋವಿಡ್ 19 ಪರೀಕ್ಷೆಯ ಅವಶ್ಯಕತೆಯಿದೆ. ವಲಸಿಗರ ರಕ್ಷಣೆ, ಆಹಾರ ಭದ್ರತೆ, ಬಡವರಿಗೆ ಆರ್ಥಿಕ ನೆರವು ನೀಡಲು ಯೋಜನೆಗಳನ್ನು ಜಾರಿಗೆ ತರುವ ಕುರಿತು ಕೇಂದ್ರವು ಕಾರ್ಯತಂತ್ರ ರೂಪಿಸುವ ಅಗತ್ಯವಿದೆ ಎಂದು ಸಲಹೆ ನೀಡಿದ್ದರು.
ಇದಕ್ಕೆ ಪ್ರತಿಕ್ರಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಲಾಕ್ಡೌನ್ ಪರಿಹಾರವಲ್ಲ ಎಂದರೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳು ಯಾಕೆ ಕೇಂದ್ರ ಸರ್ಕಾರ ಲಾಕ್ಡೌನ್ ಅವಧಿ ವಿಸ್ತರಿಸುವ ಮುನ್ನವೇ ಲಾಕ್ಡೌನ್ ವಿಸ್ತರಿಸಿದವು? ಎಂದು ಕೇಳಿದ್ದಾರೆ.
ತೀವ್ರವಾಗಿ ಹಾನಿಗೊಳಗಾದ ಇತರ ಕೊರೊನಾ ಪೀಡಿತ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವು ಕೋವಿಡ್ 19 ಬಿಕ್ಕಟ್ಟನ್ನು ಗಮನಾರ್ಹವಾಗಿ ಎದುರಿಸಿದೆ ಎಂಬುದನ್ನು ಡೇಟಾ ಸಹಿತ ಬಿಜೆಪಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ತಿಳಿಸಿದೆ. ಭಾರತದಲ್ಲಿನ ಒಂದು ದಶಲಕ್ಷ ಜನಸಂಖ್ಯೆಗೆ ಕೇವಲ ಒಂಬತ್ತು ಪ್ರಕರಣಗಳು ಹಾಗೂ 0.3 ಸಾವುಗಳು ಎಂಬುದನ್ನು ಉಲ್ಲೇಖಿಸಿದೆ.