ನವದೆಹಲಿ: ಭಾರತೀಯ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆ ಐಸಿಎಂಆರ್ ಇಂದು ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ವಿಜ್ಞಾನ ಮತ್ತು ಲಸಿಕೆಗಳ ತಯಾರಿಕೆಯಲ್ಲಿ ನೈತಿಕತೆ ಮತ್ತು ವಿಜ್ಞಾನದಲ್ಲಿ ಹೊಸ ಪರಿಕಲ್ಪನೆ ಎಂಬ ವಿಷಯದ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಿದೆ.
ವಿಚಾರ ಸಂಕಿರಣದಲ್ಲಿ ಪ್ರಮುಖ ವೈದ್ಯಕೀಯ ತಜ್ಞರು ಮತ್ತು ವಿಜ್ಞಾನಿಗಳು ಭಾಗವಹಿಸಲಿದ್ದು, ತಮ್ಮ ವಿಚಾರ ಮಂಡಿಸಲಿದ್ದಾರೆ. ಇಂದು ಸಂಜೆ 4:30 ರಿಂದ 6:45 ರವರೆಗೆ ಈ ಕಾರ್ಯಕ್ರಮ ನಡೆಯಲಿದೆ.
ಅಮೆರಿಕದ ರಾಷ್ಟ್ರೀಯ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳ ನಿರ್ದೇಶಕ ಡಾ. ಆಂಥೋನಿ ಎಸ್ ಫೌಸಿ ಅವರು "ಸಾಂಕ್ರಾಮಿಕ ರೋಗವನ್ನು ಎದುರಿಸುವುದು" ಹೇಗೆ ಎಂಬ ಕುರಿತು ಮಾತನಾಡಲಿದ್ದಾರೆ. ಇಂಗ್ಲೆಂಡ್ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಜೆನ್ನರ್ ಇನ್‌ಸ್ಟಿಟ್ಯೂಟ್ ಮತ್ತು ಮಾನವ ಜೆನೆಟಿಕ್ಸ್ ಪ್ರಾಧ್ಯಾಪಕ ಪ್ರೊಫೆಸರ್ ಆಡ್ರಿಯನ್ ಹಿಲ್ ಮತ್ತು ಅಮೆರಿಕದ ಎಮೋರಿ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಎಮೋರಿ ಲಸಿಕೆ ಕೇಂದ್ರದ ಪ್ರಾಧ್ಯಾಪಕ ಮತ್ತು ಸಹಾಯಕ ನಿರ್ದೇಶಕ ಪ್ರೊಫೆಸರ್ ವಾಲ್ಟರ್ ಒರೆನ್‌ಸ್ಟೈನ್ ವಿಜ್ಞಾನದಲ್ಲಿ ಹೊಸ ಪರಿಕಲ್ಪನೆ ಎಂಬ ಕುರಿತು ಚರ್ಚೆ ನಡೆಸಲಿದ್ದಾರೆ.