ನವದೆಹಲಿ: ಬುದ್ಧಪೂರ್ಣಿಮೆಯಂದು ಜಮಾತ್ ಉಲ್ ಮುಜಾಹುದ್ದೀನ್ ಅಥವಾ ಇಸ್ಲಾಮಿಕ್ ಸ್ಟೇಸ್ ಉಗ್ರರು ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ ಎಂದು ಸೆಂಟ್ರಲ್ ಇಂಟೆಲಿಜೆನ್ಸ್ ಬ್ಯುರೋ ಎಚ್ಚರಿಕೆ ನೀಡಿದೆ.
ಗರ್ಭಿಣಿ ಸೋಗಿನಲ್ಲಿ ಹಿಂದೂ ಅಥವಾ ಬೌದ್ಧರ ಪ್ರಾರ್ಥನಾ ಮಂದಿರದ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ. ಭಾರತದ ಪಶ್ಚಿಮ ಬಂಗಾಳ ಹಾಗೂ ಬಾಂಗ್ಲಾದೇಶದ ಭಾಗದಲ್ಲಿ ದಾಳಿ ನಡೆಯಬಹುದು ಎಂದು ಎಚ್ಚರಿಸಿದೆ. ಸೇನಾಪಡೆ ಹೈ ಅಲರ್ಟ್ ಆಗಿರುವಂತೆಯೂ ಹೇಳಿದೆ.
ಈ ಬಗ್ಗೆ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ. ಅದರಂತೆಯೆ, ಪಶ್ಚಿಮ ಬಂಗಾಳದ ಪೊಲೀಸರು ಹಿಂದೂ ಹಾಗೂ ಬೌದ್ಧರ ಪ್ರಾರ್ಥನಾ ಮಂದಿರಗಳಿಗೆ ಭದ್ರತೆ ಒದಗಿಸಿದ್ದಾರೆ.
ಎರಡು ವಾರಗಳ ಹಿಂದೆ ಐಎಸ್ಐಎಸ್ ಟೆಲಿಗ್ರಾಂ ಮೂಲಕ ಬಂಗಾಳದ ಭಾಗದಲ್ಲಿ ದಾಳಿ ನಡೆಸುವ ಸೂಚನೆ ನೀಡಿತ್ತು. ಇದೇ ರೀತಿಯ ಎಚ್ಚರಿಕೆ ಸಂದೇಶ ಶ್ರೀಲಂಕಾಗೂ ಬಂದಿತ್ತು. ಆದರೆ, ನಿರ್ಲಕ್ಷ್ಯವಹಿಸಿದ ಪರಿಣಾಮ ಅಪಾರ ಪ್ರಮಾಣದಲ್ಲಿ ಪ್ರಾಣಹಾನಿ ಸಂಭವಿಸಿತು. ಈ ಕಾರಣಕ್ಕಾಗಿ ನಾವು ಚಾನ್ಸ್ ತೆಗೆದುಕೊಳ್ಳದೆ, ಭದ್ರತೆ ಬಿಗಿಗೊಳಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.