ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದು, ನಾಲ್ಕು ದಿನಗಳೇ ಕಳೆದಿದ್ದರೂ ಸರ್ಕಾರ ರಚನೆಯ ಅನಿಶ್ಚಿತತೆ ಮಾತ್ರ ಮುಂದುವರೆದಿದೆ.
ಸರ್ಕಾರ ರಚನೆಯ ತೆರೆಮರೆ ಕಸರತ್ತುಗಳು ನಡೆಯುತ್ತಿದ್ದು, ಮುಂದಿನ ಐದು ವರ್ಷಕ್ಕೆ ನಾನೇ ಸಿಎಂ ಈ ವಿಚಾರದಲ್ಲಿ ಯಾವುದೇ ಸಂಶಯವಿಲ್ಲ ಎಂದು ನಿಯೋಜಿತ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸ್ಪಷ್ಟನೆ ನೀಡಿದ್ದಾರೆ.
ಇತ್ತ ಮೈತ್ರಿ ಪಕ್ಷ ಶಿವಸೇನೆ ಸಹ ಸಿಎಂ ಪಟ್ಟದ ಮೇಲೆ ಕಣ್ಣಿಟ್ಟಿದ್ದು, 50-50 ಫಾರ್ಮುಲಾ ದಾಳ ಉರುಳಿಸಿದೆ. ಆದರೆ, ಶಿವಸೇನೆಗೆ ಮುಖ್ಯಮಂತ್ರಿ ಹುದ್ದೆ ನೀಡುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಶಿವಸೇನೆಯಿಂದ ಆದಿತ್ಯ ಠಾಕ್ರೆ ಹೆಸರು ಸಿಎಂ ಸ್ಥಾನಕ್ಕೆ ಬಲವಾಗಿ ಕೇಳಿಬರುತ್ತಿದೆ. ವರ್ಲಿ ಕ್ಷೇತ್ರದಿಂದ ಜಯಗಳಿಸಿರುವ ಆದಿತ್ಯ ಠಾಕ್ರೆ ಮುಂದಿನ ಸಿಎಂ ಎಂದು ಮೈತ್ರಿಪಕ್ಷ ಬಿಂಬಿಸುತ್ತಿದೆ.
ಮೈತ್ರಿಯಲ್ಲಿ ಮುನಿಸು..? ಪ್ರತ್ಯೇಕವಾಗಿ ರಾಜ್ಯಪಾಲರನ್ನು ಭೇಟಿ ಮಾಡಿದ ಸಮ್ಮಿಶ್ರ ನಾಯಕರು
ಮೈತ್ರಿ ನಾಯಕರಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಮಾತಿಗೆ ಪುಷ್ಟಿ ನೀಡುವಂತೆ ಸೋಮವಾರ ಬಿಜೆಪಿ ಹಾಗೂ ಶಿವಸೇನ ನಾಯಕರು ಪ್ರತ್ಯೇಕವಾಗಿ ರಾಜ್ಯಪಾಲರನ್ನು ಭೇಟಿಯಾಗಿದ್ದರು.
288 ಕ್ಷೇತ್ರಗಳ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 105, ಶಿವಸೇನ 56, ಕಾಂಗ್ರೆಸ್ 44 ಹಾಗೂ ಎನ್ಸಿಪಿ 54 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಬಿಜೆಪಿ-ಶಿವಸೇನ ಮತ್ತು ಕಾಂಗ್ರೆಸ್-ಎನ್ಸಿಪಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದವು. ಸಣ್ಣಪುಟ್ಟ ಪಕ್ಷ ಹಾಗೂ ಸ್ವತಂತ್ರರು ಸೇರಿಒ 30 ಸದಸ್ಯರಿದ್ದಾರೆ. ಈ ಮೂವತ್ತೂ ಜನ ಬಿಜೆಪಿಗೆ ಬೆಂಬಲ ಕೊಟ್ಟರೂ ಸರ್ಕಾರ ರಚನೆ ಅಸಾಧ್ಯ.. ಹೀಗಾಗಿ ಶಿವಸೇನೆ ಬೆಂಬಲ ಬಿಜೆಪಿಗೆ ಬೇಕೇಬೇಕು. ಇದೇ ಕಾರಣಕ್ಕೆ ಶಿವಸೇನೆ 50-50 ಫಾರ್ಮುಲಾಗೆ ಬೇಡಿಕೆ ಇಟ್ಟಿದೆ.
ಈ ನಡುವೆ ಬಿಜೆಪಿ ಎಂಪಿಯೊಬ್ಬರು ಶಿವಸೇನೆಯ 45 ಶಾಸಕರು ಸಿಎಂ ಪಡ್ನವಿಸ್ ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದರು. ಒಟ್ಟಿನಲ್ಲಿ ಮಹಾರಾಷ್ಟ್ರದಲ್ಲಿ ಸಿಎಂ ಹಗ್ಗೆ ಜಗ್ಗಾಟ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ.