ಮಲೇರಿಯಾ ಚಿಕಿತ್ಸೆಗಾಗಿ ಬಳಸಲಾಗುತ್ತಿದ್ದ ಹೈಡ್ರಾಕ್ಸಿಕ್ಲೊರೋಕ್ವಿನ್ ಔಷಧವು ಕೋವಿಡ್-19 ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗಿತ್ತು. ಆದರೆ ಹೈಡ್ರಾಕ್ಸಿಕ್ಲೊರೋಕ್ವಿನ್ನಿಂದ ಒಳ್ಳೆಯ ಪರಿಣಾಮಗಳ ಜೊತೆಗೆ ಅಡ್ಡಪರಿಣಾಮಗಳೂ ಹೆಚ್ಚು ಎಂದು ಈಗ ವಾದಿಸಲಾಗುತ್ತಿದೆ. ಬ್ರೆಜಿಲ್ನ ಟ್ರಾಪಿಕಲ್ ಮೆಡಿಕಲ್ ಫೌಂಡೇಶನ್ನಲ್ಲಿ ಕೋವಿಡ್-19 ರೋಗಿಗಳ ಮೇಲೆ ಹೈಡ್ರಾಕ್ಸಿಕ್ಲೊರೋಕ್ವಿನ್ ಟ್ರಯಲ್ಸ್ ನಡೆಸಲಾಗುತ್ತಿತ್ತು. ಆದರೆ ರೋಗಿಗಳ ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬ ಕಾರಣದಿಂದ ಹೈಡ್ರಾಕ್ಸಿಕ್ಲೊರೋಕ್ವಿನ್ ಟ್ರಯಲ್ಸ್ ನಿಲ್ಲಿಸಲಾಗಿದೆ ಎಂದು ಹೇಳಲಾಗಿದೆ.
ಅಧ್ಯಯನದಲ್ಲಿ ಕೆಲ ರೋಗಿಗಳಿಗೆ ಹೆಚ್ಚು ಡೋಸ್ ಹಾಗೂ ಇನ್ನು ಕೆಲವರಿಗೆ ಕಡಿಮೆ ಡೋಸ್ ಹೈಡ್ರಾಕ್ಸಿಕ್ಲೊರೋಕ್ವಿನ್ ನೀಡಲಾಗಿತ್ತು. ರೋಗಿಗಳಿಗೆ ನೀಡಲಾದ ಔಷಧದ ಪ್ರಮಾಣದ ಬಗ್ಗೆ ವೈದ್ಯರು ಹಾಗೂ ರೋಗಿಗಳು ಇಬ್ಬರಿಗೂ ತಿಳಿಯದಂತೆ ನೋಡಿಕೊಳ್ಳಲಾಗಿತ್ತು. ಆದರೆ ರೋಗಿಗಳಿಗೆ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡ ನಂತರ ಟ್ರಯಲ್ಸ್ ನಿಲ್ಲಿಸಲಾಯಿತು.
ರೋಗ ಗುಣಪಡಿಸಲು ಬೇಕಾದ ಪರಿಣಾಮಗಳನ್ನು ಹೈಡ್ರಾಕ್ಸಿಕ್ಲೊರೋಕ್ವಿನ್ ಉಂಟುಮಾಡುತ್ತದಾದರೂ, ಅಷ್ಟೇ ಪ್ರಮಾಣದ ಅಡ್ಡಪರಿಣಾಮಗಳನ್ನು ಸಹ ತೋರಿಸುತ್ತದೆ. ಎಲ್ಲ ರೋಗಿಗಳಲ್ಲೂ ಒಂದೇ ತೆರನಾದ ಅಡ್ಡಪರಿಣಾಮಗಳು ಕಾಣಿಸಿಕೊಳ್ಳದಿರಬಹುದು. ಆದರೆ ಅಡ್ಡಪರಿಣಾಮಗಳ ಬಗ್ಗೆ ತುರ್ತು ವೈದ್ಯಕೀಯ ನಿಗಾ ಅಗತ್ಯ ಎಂದು ಹೇಳಲಾಗಿದೆ.
ಮೈಮೇಲೆ ಗುಳ್ಳೆಗಳಾಗುವುದು, ಹೃದಯ ಸಮಸ್ಯೆ, ತಲೆ ಸುತ್ತುವಿಕೆ, ದೃಷ್ಟಿ ಸಮಸ್ಯೆ, ಸ್ನಾಯು ನೋವು, ವಿಚಿತ್ರ ನಡವಳಿಕೆ, ಬಾಯಿ ಒಣಗುವಿಕೆ, ಹಸಿವಾಗದಿರುವುದು ಹೀಗೆ ಇನ್ನೂ ಹಲವಾರು ಅಡ್ಡಪರಿಣಾಮಗಳನ್ನು ಪಟ್ಟಿ ಮಾಡಲಾಗಿದೆ. ಎಲ್ಲ ಅಡ್ಡಪರಿಣಾಮಗಳಿಗೂ ಚಿಕಿತ್ಸೆ ನೀಡಬೇಕಿಲ್ಲ. ಹೈಡ್ರಾಕ್ಸಿಕ್ಲೊರೋಕ್ವಿನ್ಗೆ ಶರೀರ ಹೊಂದಿಕೊಳ್ಳುತ್ತ ಸಾಗಿದಂತೆ ಅಡ್ಡಪರಿಣಾಮಗಳು ತಾನಾಗಿಯೇ ಕಡಿಮೆಯಾಗುತ್ತವೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ.