ಹೈದ್ರಾಬಾದ್: ಪಶುವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ಕರ್ತವ್ಯಲೋಪವೆಸಗಿದ ಆರೋಪದ ಮೇಲೆ ಶಾದ್ನಗರ ಠಾಣೆಯ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.
ಮೃತಳ ಪೋಷಕರು ದೂರು ನೀಡಲು ಬಂದಾಗ ಎಫ್ಐಆರ್ ದಾಖಲಿಸಲು ವಿಳಂಬ ಮಾಡಿದ್ದಾರೆ ಎಂಬ ಆರೋಪದ ಮೇಲೆ ಎಸ್‌ಐ ರವಿಕುಮಾರ್, ಕಾನ್ಸ್ಟೇಬಲ್ಗಳಾದ ವೇಣುಗೋಪಾಲ್ ಮತ್ತು ಸತ್ಯನಾರಾಯಣ ಎಂಬುವರನ್ನು ಅಮಾನತುಗೊಳಿಸಿ ಸೈಬರಾಬಾದ್ ಪೊಲೀಸ್ ಆಯುಕ್ತ ವಿ.ಸಿ.ಸಜ್ಜನಾರ್ ಆದೇಶ ಹೊರಡಿಸಿದ್ದಾರೆ ಎಂದು ಶಂಶಾಬಾದ್ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಘಟನೆಗೂ ಮುನ್ನ ಅನುಮಾನದ ಮೇರೆಗೆ ಶಂಶಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ತೆರಳಿದ್ದಾಗ ಪೊಲೀಸರು ಸರಿಯಾಗಿ ಪ್ರತಿಕ್ರಿಯಿಸದೆ ದೂರು ಸ್ವೀಕರಿಸಿರಲಿಲ್ಲ. ತಕ್ಷಣವೇ ಎಫ್ಐಆರ್ ದಾಖಲಿಸಿ ಮಗಳನ್ನು ಹುಡುಕುವ ಪ್ರಯತ್ನ ಮಾಡಿದ್ದರೆ ನಮ್ಮ ಮಗಳನ್ನು ಉಳಿಸಿಕೊಳ್ಳಬಹುದಿತ್ತೇನೋ. ನಮ್ಮ ಮಗಳ ಸಾವಿಗೆ ಪೊಲೀಸರೂ ಕಾರಣ ಎಂದು ಪಶುವೈದ್ಯೆಯ ಪೋಷಕರು ಆರೋಪಿಸಿದ್ದಾರೆ. ಹೀಗಾಗಿ ಲೋಪವೆಸಗಿದ ಆರೋಪದ ಮೇಲೆ ಎಸ್‌ಐ ಸೇರಿದಂತೆ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.