ಪಶ್ಚಿಮ ಗೋದಾವರಿ (ಆಂಧ್ರಪ್ರದೇಶ): ಪತ್ನಿಗೆ ಕೊರೊನಾ ವೈರಸ್ ತಗುಲಿದೆ ಎಂಬ ವಿಷಯ ಕೇಳಿ ಗಂಡ ಆಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯಲ್ಲಿ ನಡೆದಿದೆ.
ಗನ್ ಬಜಾರ್ದಲ್ಲಿ ವಾಸವಾಗಿದ್ದ ವ್ಯಕ್ತಿಯ ಪತ್ನಿಗೆ ಕೊರೊನಾ ಸೋಂಕು ತಗುಲಿದ್ದು, ಜೂನ್ 8ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಇವರು ವಾಸವಿದ್ದ ಪ್ರದೇಶವನ್ನು ರೆಡ್ ಝೋನ್ ಎಂದು ಗುರುತಿಸಿ, ಕುಟುಂಬದ ಸದಸ್ಯರನ್ನು ಕ್ವಾರಂಟೈನ್ ಮಾಡಲಾಗಿದೆ.
ಆದರೆ, ಹೆಂಡತಿಗೆ ಕೊರೊನಾ ಹರಡಿರುವ ಸುದ್ದಿ ಗಂಡನಿಗೆ ಗೊತ್ತಾಗುತ್ತಿದ್ದಂತೆ ಆತ ಕುಸಿದು ಬಿದ್ದಿದ್ದಾನೆ. ಬಳಿಕ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಮೃತ ವ್ಯಕ್ತಿಗೂ ಕೊರೊನಾ ಟೆಸ್ಟ್ ಮಾಡಿಸಲಾಗಿದ್ದು, ವರದಿ ನೆಗೆಟಿವ್ ಬಂದಿದೆ. ಆದರೆ ಮಗನಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.