ಪಾಟ್ನಾ(ಬಿಹಾರ): ಯಾವುದೇ ಕಾರಣಕ್ಕೂ ಆಧುನೀಕರಣಕ್ಕೆ ಒಗ್ಗದೆ ಸಣ್ಣ ಬಟ್ಟೆಯನ್ನೂ ತೊಡಲ್ಲ, ಮದ್ಯವನ್ನೂ ಸೇವಿಸಲ್ಲ ಎಂದಿದ್ದಕ್ಕೆ ಪತಿ ತನ್ನ ಪತ್ನಿಗೆ ತಲಾಖ್ ನೀಡಿದ್ದಾನೆ.
ನೂರಿ ಫಾತ್ಮಾ ಎಂಬ ಮಹಿಳೆಗೆ 2015ರಲ್ಲಿ ಇಮ್ರಾನ್ ಮುಸ್ತಫಾ ಜೊತೆಗೆ ವಿವಾಹ ನಡೆದಿತ್ತು. ಮದುವೆಯಾದ ಕೆಲವೇ ದಿನಗಳಲ್ಲಿ ಅವರು ಬಿಹಾರದಿಂದ ದೆಹಲಿಗೆ ಶಿಫ್ಟ್ ಆಗಿದ್ದರು. ಆದರೆ ದೆಹಲಿಯ ಆಧುನಿಕತೆಗೆ ನೀನು ಬದಲಾಗಬೇಕೆಂದು ಇಮ್ರಾನ್ ನೂರಿ ಫಾತ್ಮಾಗೆ ಪೀಡಿಸುತ್ತಿದ್ದನಂತೆ. ಅಲ್ಲದೆ ರಾತ್ರಿ ನಡೆಯೋ ಪಾರ್ಟಿಗಳಿಗೆ ಸಣ್ಣ ಉಡುಪುಗಳನ್ನು ಧರಿಸಿಕೊಂಡು ಬರಬೇಕೆಂದು ಒತ್ತಾಯಿಸುತ್ತಿದ್ದನಂತೆ. ಇಷ್ಟು ಮಾತ್ರವಲ್ಲದೆ ನನ್ನ ಜೊತೆ ಸೇರಿಕೊಂಡು ಮದ್ಯ ಸೇವಿಸಬೇಕೆಂದೂ ಹೇಳುತ್ತಿದ್ದನಂತೆ.
ಪತಿಯ ಈ ಚೇಷ್ಟೆಗೆಲ್ಲಾ ನೂರಿ ಫಾತ್ಮಾ ಒಪ್ಪಿರಲಿಲ್ಲ. ಹೀಗಾಗಿ ಕೆಲ ದಿನಗಳ ಹಿಂದೆಯಷ್ಟೇ ಮನೆ ಬಿಟ್ಟು ಹೋಗುವಂತೆ ಇಮ್ರಾನ್ ಕಾಡಿದ್ದ. ಇದಕ್ಕೆ ಒಪ್ಪದಿರುವುದಕ್ಕೆ ನನಗೆ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ನೂರಿ ಫಾತ್ಮಾ ಹೇಳಿಕೊಂಡಿದ್ದಾರೆ.
ಮುಸಾಲ್ಮಾನ ಮಹಿಳೆಯ ವಿವಾಹದ ಹಕ್ಕುಗಳ ರಕ್ಷಣೆ ಕಾಯ್ದೆ 2019 ದೇಶದಲ್ಲಿ ಜಾರಿಗೆ ಬಂದಿದೆ. ಇದರಂತೆ ತ್ರಿವಳಿ ತಲಾಖ್ ನೀಡುವುದು ಶಿಕ್ಷಾರ್ಹ ಅಪರಾಧ. ಹೊಸ ಕಾನೂನಿನ ಪ್ರಕಾರ, ತಲಾಖ್ ನೀಡಿದ ಪತಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ.