ಒಂದೆಡೆ ಕೊರೊನಾ ಸಾಂಕ್ರಾಮಿಕದ ದಾಳಿಯಿದ್ದರೆ, ಇನ್ನೊಂದೆಡೆ ನೈಸರ್ಗಿಕ ಪ್ರಕೋಪಗಳು ಸೇರಿಕೊಂಡು ದೇಶ ಇವೆರಡರ ನಡುವೆ ಸಿಲುಕಿಕೊಂಡು ನಲುಗುತ್ತಿದೆ. ಭಾರಿ ಮಳೆ ಹಾಗೂ ಪ್ರವಾಹಗಳು ಅಸ್ಸಾಂ, ಮಹಾರಾಷ್ಟ್ರ, ಕೇರಳ ಹಾಗೂ ದೆಹಲಿ ಸೇರಿದಂತೆ ದೇಶದ ವಿವಿಧ ಕಡೆ ಮುಳುಗಿಸುತ್ತಿವೆ.
ಕಳೆದ ತಿಂಗಳು ಸಂಭವಿಸಿದ ಭಾರಿ ಮಳೆ ಅಸ್ಸಾಂನಲ್ಲಿ ಪ್ರಕೋಪವನ್ನೇ ಸೃಷ್ಟಿಸಿತ್ತು. ಈ ತಿಂಗಳು, ಮುಂಬೈನಲ್ಲಿ ಮೊದಲ ವಾರ ಬಂದ ಭಾರಿ ಮಳೆಯು, ದೇಶದ ವಾಣಿಜ್ಯ ರಾಜಧಾನಿಯ ತಗ್ಗು ಪ್ರದೇಶಗಳನ್ನು ಈಗಲೂ ತುಂಬಿಕೊಂಡಿದೆ. ಇದರಿಂದಾಗಿ ಸಾರಿಗೆ ಹಾಗೂ ನಾಗರಿಕ ಜೀವನ ಸ್ಥಗಿತಗೊಂಡಿದೆ. ಕೇವಲ 24 ಗಂಟೆಗಳಲ್ಲಿ ದಾಖಲೆ 200 ಮಿ.ಮೀ. ಮಳೆ ಬಂದಿದ್ದು, ಕಳೆದ 15 ವರ್ಷಗಳಲ್ಲಿ ಸುರಿದಿರುವ ಅತ್ಯಧಿಕ ಪ್ರಮಾಣದ ಮಳೆ ಇದು. ಇನ್ನು ಈ ತಿಂಗಳಿನ 8ನೇ ದಿನ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಅಪ್ಪಳಿಸಿದ ಮಳೆಯಿಂದಾಗಿ, ಚಹ ತೋಟಗಳ ಕೆಲಸಗಾರರ ಮನೆಗಳ ಮೇಲೆ ಭಾರೀ ಪ್ರಮಾಣದ ಭೂಕುಸಿತವಾಗಿದ್ದು, ಇದರಿಂದಾಗಿ ಹಲವಾರು ಕಾರ್ಮಿಕರು ಜೀವ ಕಳೆದುಕೊಳ್ಳುವಂತಾಯಿತು. ಇಷ್ಟೊಂದು ಭಾರೀ ಪ್ರಮಾಣದ ಜೀವ ಹಾಗೂ ಆಸ್ತಿ ನಷ್ಟಗಳು ದೇಶದ ವಿವಿಧೆಡೆ ಸಂಭವಿಸಿದ್ದರೂ ಕೂಡ ಮುಂಗಾರಿನ ಈ ವಾರ್ಷಿಕ ಸಂಭವನೀಯ ಪ್ರವಾಹ ಹಾಗೂ ಅದರಿಂದ ಉಂಟಾಗುವ ಹಾನಿಯನ್ನು ನಿಯಂತ್ರಿಸಲು ಯಾವುದೇ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿಲ್ಲದಿರುವುದು ಕಳವಳಕಾರಿ ಸಂಗತಿಯಾಗಿದೆ.
ವಾರ್ಷಿಕ ಕರ್ಮ!
ಹಿಂದಿನ ದಿನಗಳಲ್ಲಿ, ಪ್ರವಾಹ ಪ್ರಕೋಪ ನಿರ್ವಹಣೆಯ ಎಲ್ಲಾ ಪ್ರಯತ್ನಗಳು ಕೇವಲ ಹಳ್ಳಿಗಳ ಮೇಲೆ ಕೇಂದ್ರೀಕೃತವಾಗಿದ್ದವು. ಹಾಗೆ ನೋಡಿದರೆ ತುಂಬಿ ಹರಿಯುವ ನದಿಗಳಿಂದಾಗಿ ಪಟ್ಟಣಗಳು, ನಗರಗಳು ಹಾಗೂ ಹಳ್ಳಿಗಳ ಮೇಲೆ ಉಂಟಾಗಿರುವ ಹಾನಿಯ ಪರಿಣಾಮಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಕ್ಷಿಪ್ರ ನಗರೀಕರಣದಿಂದಾಗಿ, ಎಲ್ಲೆಡೆ ಮಳೆ ನೀರಿನ ಸಹಜ ಹರಿವಿಗೆ ಅಡೆತಡೆ ಉಂಟಾಗುತ್ತಿದೆ. ಅವ್ಯವಸ್ಥಿತ ಯೋಜನೆ ಹಾಗೂ ಅನಧಿಕೃತ ನಿರ್ಮಾಣಗಳು ನೀರಿನ ಹರಿವನ್ನು ತಡೆಯುತ್ತಿದ್ದು, ಮಳೆ ನೀರು ಸಂಗ್ರಹ ಯೋಜನೆಗಳು ಕೂಡ ನಮ್ಮಲ್ಲಿ ಸಾಕಷ್ಟು ಪ್ರಮಾಣದಲ್ಲಿಲ್ಲ. ಇದರ ಪರಿಣಾಮವಾಗಿ, ಭಾರಿ ಮಳೆ ಬಂದಾಗ ಮತ್ತು ಮೇಘ ಸ್ಫೋಟದಂತಹ ಘಟನೆಗಳು ಸಂಭವಿಸಿದಾಗ, ಪ್ರವಾಹದ ತೀವ್ರತೆಯು ಎಂಟು ಪಟ್ಟು ಹೆಚ್ಚುತ್ತಿದ್ದು, ಹರಿಯುವ ನೀರಿನ ಪ್ರಮಾಣದಲ್ಲಿ ಆರು ಪಟ್ಟು ಹೆಚ್ಚಳವಾಗುತ್ತಿದೆ. ಹೀಗಾಗಿ ತಗ್ಗು ಪ್ರದೇಶಗಳು ಹಲವಾರು ದಿನಗಳ ಕಾಲ ನೀರಿನಲ್ಲಿ ಮುಳುಗುವಂತಾಗಿದೆ.
ಮುಂಬೈ, ಕೇರಳ ಹಾಗೂ ದೆಹಲಿಯಲ್ಲಿ ಉಂಟಾದ ಇತ್ತೀಚಿನ ಪ್ರವಾಹಗಳ ನಿಜವಾದ ಕಾರಣ ಇದು. ಇನ್ನು ಪ್ರಸಕ್ತ ಸವಾಲು ಏನೆಂದರೆ, ನಗರ ಪ್ರವಾಹ ಪರಿಸ್ಥಿತಿಯಿಂದಾಗಿ ಸಾಂಕ್ರಾಮಿಕ ರೋಗಗಳು ಹಬ್ಬುವ ಭೀತಿ ತಲೆದೋರಿರುವುದು. ಅಸ್ಸಾಂನಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹಗಳು ದೊಡ್ಡ ಪ್ರಮಾಣದ ಆಸ್ಪತ್ರೆ ತ್ಯಾಜ್ಯ, ಬೀಸಾಕಿದ ಪಿಪಿಇ (ವೈಯಕ್ತಿಕ ಸುರಕ್ಷತಾ ಸಾಧನಗಳು) ಕಿಟ್‌ಗಳು ಹಾಗೂ ಕೋವಿಡ್ ಆರೈಕೆ ಕೇಂದ್ರಗಳ ತ್ಯಾಜ್ಯಗಳನ್ನು ಹೊತ್ತೊಯ್ದಿದ್ದು, ಮುಳುಗಡೆ ಪ್ರದೇಶದ ಜನರಲ್ಲಿ ಭೀತಿ ಮೂಡಿಸಿವೆ.
ದಶಕಗಳ ಕಾಲ ಹಳೆಯದಾಗಿರುವ ಚರಂಡಿ ವ್ಯವಸ್ಥೆ ಹಾಗೂ ಅವುಗಳ ಶೋಚನೀಯ ನಿರ್ವಹಣೆಯೇ ಬೃಹನ್ನಗರಗಳ ಪ್ರದೇಶಗಳು ಹಾಗೂ ನಗರಗಳಲ್ಲಿ ಸಂಭವಿಸುತ್ತಿರುವ ಪ್ರಸಕ್ತ ಪ್ರವಾಹಗಳಿಗೆ ಮುಖ್ಯ ಕಾರಣಗಳಾಗಿವೆ. ಚರಂಡಿ ನೀರಿನ ಕೊಳಾಯಿಗಳಲ್ಲಿ ತುಂಬಿಕೊಂಡಿರುವ ಕೊಚ್ಚೆಯನ್ನು ತೆರವುಗೊಳಿಸದೇ ಇರುವುದು ಹಾಗೂ ಅವುಗಳಲ್ಲಿ ಕೊಳಚೆ ಹಾಗೂ ತ್ಯಾಜ್ಯವಸ್ತುಗಳು ತುಂಬಿಕೊಂಡಿರುವುದರಿಂದ ಸಣ್ಣ ಮಳೆಗೂ ರಸ್ತೆಗಳ ಮೇಲೆ ದೊಡ್ಡ ಪ್ರಮಾಣದ ಪ್ರವಾಹ ಉಂಟಾಗಲು ಕಾರಣವಾಗುತ್ತಿದೆ. ನಗರಗಳ ಪ್ರವಾಹಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ, ಅಲ್ಲಿರುವ ಅಕ್ರಮ ನಿರ್ಮಾಣಗಳು.
ದೇಶದ ಎಲ್ಲಾ ನಗರಗಳು ಹಾಗೂ ಪಟ್ಟಣಗಳನ್ನು ಆವರಿಸಿರುವ ಈ ಅಕ್ರಮ ನಿರ್ಮಾಣ ಚಟುವಟಿಕೆಗಳು ಮಳೆನೀರಿನ ಮುಕ್ತ ಹರಿವಿಗೆ ದೊಡ್ಡ ಅಡಚಣೆಯಾಗಿ ಪರಿಣಮಿಸಿವೆ. ಅನಧಿಕೃತ ನಿರ್ಮಾಣ, ನಗರಗಳಲ್ಲಿರುವ ಕೆರೆಗಳು ಹಾಗೂ ಜಲಮೂಲಗಳ ಒತ್ತುವರಿ, ಚರಂಡಿಗಳ ಅಸಮರ್ಪಕ ನಿರ್ವಹಣೆ ಮುಂತಾದವು ಕ್ಷಿಪ್ರ ನಗರೀಕರಣದ ದುಷ್ಪರಿಣಾಮಗಳಾಗಿವೆ. ಇವು ಪರಿಸ್ಥಿತಿಯನ್ನು ಇನ್ನಷ್ಟು ವಿಷಮಿಸುತ್ತಿವೆ. ಪ್ರತಿ ವರ್ಷದ ಅನಿವಾರ್ಯ ಪೀಡೆಯಾಗುತ್ತಿರುವ ಈ ಪ್ರವಾಹಗಳ ಭೀತಿಯನ್ನು ನಿವಾರಿಸಬೇಕೆಂದರೆ, ಚರಂಡಿಗಳು ಹಾಗೂ ಪ್ರವಾಹ ನೀರಿನ ಕಾಲುವೆಗಳ ಒತ್ತುವರಿಯನ್ನು ತಕ್ಷಣ ತೆಗೆದುಹಾಕಬೇಕು. ಪ್ರತಿ ವರ್ಷ, ಮುಂಗಾರು ಆಗಮಿಸುವುದಕ್ಕೂ ಮುನ್ನವೇ, ಚರಂಡಿಗಳ ನಾಲೆಗಳ ಹೂಳನ್ನು ಹಾಗೂ ಅಡಚಣೆಗಳನ್ನು ತೆಗೆದುಹಾಕಬೇಕು. ಇದಕ್ಕಾಗಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು.
ಚರಂಡಿ ಹರಿವು ಸುಧಾರಿಸಬೇಕಿದೆ:
ಪ್ರತಿ ವರ್ಷ ಮುಂಗಾರು ಋತುವಿನಲ್ಲಿ ಎಷ್ಟು ಪ್ರಮಾಣದ ಪ್ರವಾಹದ ನೀರು ಹರಿಯುತ್ತದೆ ಹಾಗೂ ಚರಂಡಿಗಳು ಹಾಗೂ ಪ್ರವಾಹ ಹರಿವು ವ್ಯವಸ್ಥೆಯ ಮೇಲೆ ಅದು ಉಂಟು ಮಾಡಬಹುದಾದ ಪರಿಣಾಮವನ್ನು ಉಪಗ್ರಹ ದತ್ತಾಂಶದ ಆಧಾರದ ಮೇಲೆ ಲೆಕ್ಕ ಹಾಕಿ ಪ್ರವಾಹದ ತೀವ್ರತೆಯನ್ನು ನಿಯಂತ್ರಿಸಬಹುದು. ಇನ್ನು, ಮಳೆ ನೀರನ್ನು ಭೂಮಿಯಲ್ಲಿ ಇಂಗಿಸಲು ಕ್ರಮಗಳನ್ನು ಕೈಗೊಳ್ಳದೇ ಎಷ್ಟೇ ಪ್ರಮಾಣದ ಪ್ರಯತ್ನಗಳನ್ನು ಮಾಡಿದರೂ ಅದೆಲ್ಲವೂ ವ್ಯರ್ಥವಾಗುತ್ತದೆ. ಒಂದು ವೇಳೆ ನಾವು ಬಿದ್ದ ಮಳೆಯ ಪ್ರತಿಯೊಂದು ಹನಿಯನ್ನೂ ಬಳಸುವಂತಾದರೆ ಹಾಗೂ ಅದನ್ನು ಭೂಮಿಯೊಳಗೆ ಇಂಗಿಸುವಂತಾದರೆ, ನಾವು ಪ್ರವಾಹವನ್ನು ನಿಯಂತ್ರಿಸುವುದಷ್ಟೇ ಅಲ್ಲ, ಅಂತರ್ಜಲ ಮಟ್ಟವನ್ನೂ ಹೆಚ್ಚಿಸಲು ಸಾಧ್ಯ. ದುರದೃಷ್ಟವಶಾತ್, ಇಷ್ಟೊಂದು ಪ್ರಮಾಣದ ಪ್ರವಾಹದ ಸಮಸ್ಯೆಗಳು ಪ್ರತಿ ವರ್ಷ ಉಂಟಾಗುತ್ತಿದ್ದರೂ, ಪರಿಣಾಮಕಾರಿ ಕ್ರಿಯಾಯೋಜನೆಯನ್ನು ಜಾರಿಗೊಳಿಸುವ ಮೂಲಕ ಅದನ್ನು ನಿಯಂತ್ರಿಸುವ ಕೆಲಸವಾಗುತ್ತಿಲ್ಲ.
ಸಾವಿರಾರು ವರ್ಷಗಳ ಹಿಂದೆಯೇ ಸಮೃದ್ಧವಾಗಿದ್ದ ಹರಪ್ಪ ಸಂಸ್ಕೃತಿಯು ಜಾರಿಗೆ ತಂದಿದ್ದ ಪರಿಣಾಮಕಾರಿ ಚರಂಡಿ ಯೋಜನೆ ವ್ಯವಸ್ಥೆಯಲ್ಲಿ ನಾವು ಕಲಿಯಬೇಕಾದ ಹಲವಾರು ಪಾಠಗಳಿವೆ. ಅಲ್ಲದೇ ಜಗತ್ತಿನ ಹಲವಾರು ದೇಶಗಳು ಚರಂಡಿ ಹಾಗೂ ಪ್ರವಾಹ ನೀರನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿರುವ ಅತ್ಯುತ್ತಮ ಪದ್ಧತಿಗಳನ್ನು ನಮ್ಮ ಪರಿಸ್ಥಿತಿಗೆ ಸೂಕ್ತವಾಗುವಂತೆ ನಾವು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳಬೇಕಿದೆ. ಆಯಾ ನಗರಗಳು ಹಾಗೂ ಪಟ್ಟಣಗಳ ಜನಸಂಖ್ಯೆಯ ಪ್ರಮಾಣ ಹಾಗೂ ಭೌಗೋಳಿಕ ಪರಿಸ್ಥಿತಿಗಳನ್ನು ಪರಿಗಣನೆಗೆ ತೆಗೆದುಕೊಂಡು ಚರಂಡಿ ಹಾಗೂ ಪ್ರವಾಹ ನಿರ್ವಹಣೆ ಯೋಜನೆಗಳನ್ನು ರೂಪಿಸಬೇಕಿದೆ. ಇದರ ಜೊತೆಗೆ, ಕೆರೆಗಳು ಹಾಗೂ ಜಲಮೂಲಗಳ ಬೇಕಾಬಿಟ್ಟಿ ಒತ್ತುವರಿ, ಭೂಮಿಯನ್ನು ಅಗೆಯುವುದಕ್ಕೆ ಪ್ರತಿಬಂಧ ವಿಧಿಸಬೇಕಿದೆ. ಆಗ ಮಾತ್ರ ನಗರಗಳು ಹಾಗೂ ಪಟ್ಟಣಗಳಲ್ಲಿ ಸಂಭವಿಸುತ್ತಿರುವ ಪ್ರವಾಹವನ್ನು ನಿಯಂತ್ರಿಸಲು ಹಾಗೂ ಜನರ ಜೀವನಮಟ್ಟವನ್ನು ಹಿತಕರವಾಗಿಸುವುದು ಸಾಧ್ಯ.