ನವದೆಹಲಿ: ದ್ವೀಪರಾಷ್ಟ್ರ ಶ್ರೀಲಂಕಾ ಸರ್ಕಾರವು ತಮಿಳು ಸಮುದಾಯದ ಆಕಾಂಕ್ಷೆಗಳನ್ನು ಸಾಕಾರಗೊಳಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಲಂಕಾದ ಮಹಿಂದಾ ರಾಜಪಕ್ಸೆ ಅವರನ್ನು ದೆಹಲಿಯ ಭೇಟಿ ಮಾಡಿದ ಬಳಿಕ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಉಭಯ ರಾಷ್ಟ್ರಗಳ ಮಾತುಕತೆ ವೇಳೆಯಲ್ಲಿ ಇಬ್ಬರೂ ಪ್ರಧಾನ ಮಂತ್ರಿಗಳು ದ್ವಿಪಕ್ಷೀಯ ಸಂಬಂಧ ವಿಸ್ತರಣೆಯ ಬಗ್ಗೆ ಚರ್ಚಿಸಿದ್ದಾರೆ. ಭಯೋತ್ಪಾದನೆಯ ವಿರುದ್ಧದ ಜಂಟಿ ಹೋರಾಟವನ್ನು ಇನ್ನಷ್ಟು ಬಲಪಡಿಸಲು ಹಾಗೂ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ವೃದ್ಧಿಸಿಕೊಳ್ಳಲು ಎರಡೂ ರಾಷ್ಟ್ರಗಳು ನಿರ್ಧರಿಸಿವೆ.
ರಾಜಪಕ್ಸೆ ಅವರು 2005ರಿಂದ 2016ರವರೆಗೆ ಶ್ರೀಲಂಕಾದ ಅಧ್ಯಕ್ಷರಾಗಿದ್ದರು. ಅವರ ಭಾರತ ಪ್ರವಾಸವು ಈ ಹಿಂದಿಗಿಂತ ಹೆಚ್ಚು ಮಹತ್ವ ಪಡೆದುಕೊಂಡಿದೆ. ಇವರ ಅಧಿಕಾರಾವಧಿ ವೇಳೆ ದ್ವೀಪ ರಾಷ್ಟ್ರದಲ್ಲಿ ಚೀನಾ ತನ್ನ ಹೆಜ್ಜೆಗುರುತುಗಳನ್ನು ವಿಸ್ತರಿಸಿಕೊಳ್ಳಲು ಹವಣಿಸಿತ್ತು. ಇದು ಭಾರತದ ಆತಂಕಕ್ಕೆ ಕಾರಣವಾಗಿತ್ತು.
ಲಂಕಾದಲ್ಲಿ ಸ್ಥಿರತೆ, ಭದ್ರತೆ ಮತ್ತು ಸಮೃದ್ಧಿಯು ಭಾರತದ ಹಿತಾಸಕ್ತಿಯಲ್ಲಿದೆ. ಇಡೀ ಹಿಂದೂ ಮಹಾಸಾಗರ ಪ್ರದೇಶದ ಹಿತದೃಷ್ಟಿಯನ್ನು ಭಾರತ ಬಯಸುತ್ತದೆ ಎಂದು ಮೋದಿ ತಿಳಿಸಿದ್ದಾರೆ.
ಭಾರತವು ಶ್ರೀಲಂಕಾದ ಅಭಿವೃದ್ಧಿಯಲ್ಲಿ ವಿಶ್ವಾಸಾರ್ಹ ಪಾಲುದಾರ ನೆರೆಯ ರಾಷ್ಟ್ರವಾಗಿದೆ. ಶಾಂತಿ ಮತ್ತು ಅಭಿವೃದ್ಧಿಯ ಪ್ರಯಾಣದಲ್ಲಿ ಆ ದೇಶಕ್ಕೆ ಸಹಾಯ ಮಾಡುವುದನ್ನು ಭಾರತ ಮುಂದುವರಿಸಲಿದೆ. ಉಗ್ರವಾದವನ್ನು ದಮನ ಮಾಡಲು ಇನ್ನಷ್ಟು ಸಹಕಾರ ನೀಡುವ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಅವರು ಹೇಳಿದ್ದಾರೆ.