ಕೋಲ್ಕತಾ : ಜೇನುನೊಣಗಳು ಮುತ್ತಿಕೊಂಡ ಕಾರಣದಿಂದ ಎರಡು ವಿಸ್ತಾರಾ ವಿಮಾನಯಾನದ ವಿಮಾನಗಳು ತಡವಾಗಿ ಪ್ರಯಾಣ ಆರಂಭಿಸಿದ ಘಟನೆ ಪಶ್ಚಿಮ ಬಂಗಾಳದ ಕಲ್ಕತ್ತಾ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಪ್ರಯಾಣಿಕರು ವಿಮಾನಗಳನ್ನು ಹತ್ತುವ ಮೊದಲು ಜೇನುನೊಣಗಳು ವಿಮಾನವನ್ನು ಮುತ್ತಿದ್ದವು. ಎರಡೂ ವಿಮಾನಗಳಲ್ಲಿ ಸುಮಾರು 150 ಮಂದಿ ಪ್ರಯಾಣಿಕರು ಆಸನಗಳನ್ನು ಕಾಯ್ದಿರಿಸಿದ್ದರು. ನಂತರ ವಿಮಾನಗಳ ಮುಂಭಾಗದಲ್ಲಿ ಜೇನುನೊಣಗಳನ್ನು ಜಲಫಿರಂಗಿಗಳನ್ನು ಬಳಸಿ ಓಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಂಜೆ 5 ಗಂಟೆಗೆ ದೆಹಲಿಗೆ ತೆರಳಬೇಕಿದ್ದ ವಿಮಾನಗಳು ತಡವಾಗಿ ಆರಂಭವಾಗಿದ್ದು, ಜೇನುನೊಣಗಳನ್ನು ಓಡಿಸಲು ವಿಮಾನ ನಿಲ್ದಾಣದ ಅಧಿಕಾರಿಗಳು ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿದ್ದರು. ಇದಾದ ನಂತರ ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿ ಕಾರ್ಯಚರಣೆ ನಡೆಸಿ ಜೇನುನೊಣಗಳನ್ನು ಓಡಿಸಿದ್ದರು.