ನವದೆಹಲಿ: ಉತ್ಪಾದನಾ ವೆಚ್ಚದ ಹೊರೆ ಹಾಗೂ ನೂತನ ಸುರಕ್ಷಾ ಕ್ರಮಗಳನ್ನು ಅಳವಡಿಸುತ್ತಿರುವುದರಿಂದ ಹೊಂಡಾ ಕಾರು ಇಂಡಿಯಾ ತನ್ನ ಉತ್ಪನ್ನಗಳ ಬೆಲೆ ಏರಿಕೆ ಮಾಡುತ್ತಿದೆ ಎಂದು ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಪರಿಷ್ಕೃತ ನೂತನ ದರವು ಮುಂದಿನ ತಿಂಗಳಿಂದ ಜಾರಿಗೆ ಬರಲಿದೆ. ಈಗಿನ ಕಾರುಗಳ ದರದ ಮೇಲೆ ಶೇ 1.2ರಷ್ಟು ಏರಿಕೆ ಆಗಲಿದೆ. ಸೆಡಾನ್ ಅಕಾರ್ಡ್ ಹೈಬ್ರಿಡ್ ಶ್ರೇಣಿಯ ಕಾರುಗಳು ₹ 4.73 ರಿಂದ ₹ 43.21 (ಎಕ್ಸ್ ಶೋ ರೂಮ್) ಬೆಲೆಯಲ್ಲಿ ಮಾರಾಟ ಆಗಲಿವೆ.
'ಜುಲೈ 1ರಿಂದ ಹೊಂಡಾ ಕಾರುಗಳ ಬೆಲೆ ಏರಿಕೆ ಜಾರಿಗೆ ಬರಲಿದೆ. ಕಳೆದ ಕೆಲವು ತಿಂಗಳಿಂದ ತಯಾರಿಕೆಯ ಕಚ್ಚಾ ವಸ್ತುಗಳ ಬೆಲೆ ಜಿಗಿತವಾಗಿದೆ. ಪ್ರಸ್ತುತ ದರದಲ್ಲಿ ಮಾರಾಟ ಮಾಡುವುದು ಕಂಪನಿಗೆ ಹೊರೆಯಾಗಲಿದ್ದು, ಇದರ ಭಾರವನ್ನು ಗ್ರಾಹಕರ ಮೇಲೆ ಹಾಕುತ್ತಿದ್ದೇವೆ' ಎಂದು ಎಚ್ಸಿಐಎಲ್ನ ಮಾರಾಟ ವಿಭಾಗದ ನಿರ್ದೇಶಕ ರಾಜೇಶ್ ಗೋಯಲ್ ಅವರು ಸ್ಪಷ್ಟನೆ ನೀಡಿದ್ದಾರೆ.