ಮುಂಬೈ/ಬೆಂಗಳೂರು: ಕೈ ಶಾಸಕ ಶ್ರೀಮಂತ್ ಪಾಟೀಲ್ ಚಿಕಿತ್ಸೆ ಪಡೆಯುತ್ತಿರುವ ಮುಂಬೈನ ಸೇಂಟ್ ಜಾರ್ಜಸ್ ಆಸ್ಪತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಶಾಸಕನನ್ನು ಕಾಯಲು ಆಸ್ಪತ್ರೆ ಒಳಗೆ ಮತ್ತು ಹೊರಗೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ.
ಎದೆ ನೋವಿನ ಹಿನ್ನೆಲೆ ಮುಂಬೈನ ಸೇಂಟ್ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ಕೈ ಶಾಸಕ ಶ್ರೀಮಂತ್ ಪಾಟೀಲ್ ಚಿಕಿತ್ಸೆ ಪಡೆಯುತ್ತಿದ್ದು, ಇದೇ ವಿಷಯ ರಾಜ್ಯ ವಿಧಾನಸಭಾ ಸದನದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಿನ್ನೆ ಕಾಂಗ್ರೆಸ್ ಶಾಸಕಿ ಯಶೋಮತಿ ಆಸ್ಪತ್ರೆಗೆ ಆಗಮಿಸಿ ಶ್ರೀಮಂತ್ ಪಾಟೀಲ್ ಭೇಟಿಗೆ ಪಟ್ಟು ಹಿಡಿದಿದ್ದರು. ಈ ವೇಳೆ ಅನುಮತಿ ನೀಡದ ಪೊಲೀಸರ ಜತೆ ವಾಗ್ವಾದ ಸಹ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಆಸ್ಪತ್ರೆಯಲ್ಲಿ ಇಂದಿನಿಂದ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.
ಆಸ್ಪತ್ರೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಅದರಲ್ಲೂ ಶ್ರೀಮಂತ್ ಪಾಟೀಲ್ ದಾಖಲಾಗಿರುವ ವಾರ್ಡ್ ಕಟ್ಟಡದಲ್ಲಿ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಯಾವುದೇ ವಿಸಿಟರ್ಗಳಿಗೆ ವಾರ್ಡ್ಗೆ ಪ್ರವೇಶ ಇಲ್ಲ. ಈ ಸಂಬಂಧ ಪ್ರವೇಶ ದ್ವಾರದಲ್ಲೇ ವಿಸಿಟರ್ಸ್ ನಾಟ್ ಅಲೌಡ್ ಎಂದು ಸ್ಟಿಕ್ಕರ್ ಅಂಟಿಸಲಾಗಿದೆ. ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿಯೇ ವಾರ್ಡ್ ಒಳಗಡೆ ಬಿಡಲಾಗುತ್ತಿದೆ. ಆ ಮೂಲಕ ಮುಂಬೈ ಪೊಲೀಸರು ಕೈ ಶಾಸಕನಿಗೆ ಬಿಗಿ ಭದ್ರತೆ ನೀಡಿದ್ದಾರೆ.