ನವದೆಹಲಿ: ಸಾಮಾಜಿಕ ಅಂತರದ ಮತ್ತೊಂದು ವಿಧಾನವನ್ನು ಎತ್ತಿ ತೋರಿಸಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಜನರು ವೈದ್ಯರ ಸಲಹೆಗಳಿಗಾಗಿ ಟೆಲಿಮೆಡಿಸಿನ್ ವಿಧಾನವನ್ನು ಅನುಸರಿಸುವಂತೆ ಸೂಚಿಸಿದೆ.
'ಜನರು ದೈಹಿಕವಾಗಿ ವೈದ್ಯರ ಬಳಿಗೆ ಹೋಗುವುದು ಅಥವಾ ಆಸ್ಪತ್ರೆಗಳಿಗೆ ಭೇಟಿ ನೀಡುವ ಬದಲು ಟೆಲಿಮೆಡಿಸಿನ್ ಅನ್ನು ಅನುಸರಿಸಬೇಕು. ಇದು ಕೋವಿಡ್-19 ವಿರುದ್ಧ ಹೋರಾಡಲು ಬಹಳ ಮುಖ್ಯವಾದ ಸಾಮಾಜಿಕ ದೂರ ಕಾಯ್ದುಕೊಳ್ಳುವುದನ್ನು ಅನುಸರಿಸಿದಂತಾಗುತ್ತದೆ' ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲುವ್ ಅಗ್ರವಾಲ್ (Luv Aggrawal)ಹೇಳಿದ್ದಾರೆ.
ದೂರವಾಣಿ ಅಥವಾ ಆನ್‌ಲೈನ್ ಆರೋಗ್ಯ ಸೇವೆಗಳ ಮೂಲಕ ಆರೋಗ್ಯ ಸೇವೆಗಳನ್ನು ದೂರದಿಂದಲೇ ತಲುಪಿಸಲು ಟೆಲಿಮೆಡಿಸಿನ್ ಅನ್ನು ಪ್ರಾರಂಭಿಸಲಾಗಿದೆ. ವಿಶೇಷವಾಗಿ ಪ್ರಸ್ತುತ ಕೋವಿಡ್ -19 ವಿರುದ್ಧದ ಹೋರಾಟಕ್ಕೆ ಇದು ಉತ್ತಮ ಅಂಶವಾಗಿದೆ ಎಂದಿದ್ದಾರೆ.
ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ನಿಯಮಿತ ಚಿಕಿತ್ಸೆ ಮತ್ತು ಸಣ್ಣ ಆರೋಗ್ಯ ಸಮಸ್ಯೆಗಳಿಗಾಗಿ ಆಸ್ಪತ್ರೆಗಳಿಗೆ ಭೇಟಿ ನೀಡುವುದನ್ನು ತಪ್ಪಿಸಲು ಸರ್ಕಾರ ಜನರಲ್ಲಿ ಮನವಿ ಮಾಡಿದೆ. ಆರೋಗ್ಯ ಸಚಿವಾಲಯ ಮತ್ತು ನಿತಿ ಆಯೋಗ ಜಂಟಿಯಾಗಿ ದೇಶದಲ್ಲಿ ಟೆಲಿಮೆಡಿಸಿನ್ ಅಭ್ಯಾಸಗಳ ಅಧಿಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಮಾರ್ಗಸೂಚಿ ಪ್ರಕಾರ, ಟೆಲಿಮೆಡಿಸಿನ್ ಅಭ್ಯಾಸವು ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ರೋಗಿಗಳಿಗೆ ಸಾಂಕ್ರಾಮಿಕ ರೋಗಗಳ ಹರಡುವಿಕೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ. ಏಮ್ಸ್ ಆಸ್ಪತ್ರೆ ಕೂಡ ಟೆಲಿಮೆಡಿಸಿನ್ ಬಳಸುವಂತೆ ವೈದ್ಯರಿಗೆ ಸಲಹೆ ನೀಡಿದೆ.