ನವದೆಹಲಿ: ಮಧ್ಯಮ ಹಾಗೂ ತೀವ್ರಗತಿಯ ಕೋವಿಡ್ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗಾಗಿ ಡೆಕ್ಸಾಮೆಥಾಸೋನ್ ಸ್ಟೆರಾಯ್ಡ್ ಬಳಕೆಗೆ ಕೇಂದ್ರದ ಆರೋಗ್ಯ ಇಲಾಖೆ ಅನುಮತಿ ನೀಡಿದೆ. ಕಡಿಮೆ ದರದಲ್ಲಿ ಲಭ್ಯವಿರುವ ಡೆಕ್ಸಾಮೆಥಾಸೋನ್ ಅನ್ನು ಕೋವಿಡ್-19 ಚಿಕಿತ್ಸಾ ಪ್ರೊಟೋಕಾಲ್ಗೆ ಈ ಮೂಲಕ ಕೇಂದ್ರ ಸೇರ್ಪಡೆ ಮಾಡಿದೆ.
ಇತ್ತೀಚೆಗೆ ತಿದ್ದುಪಡಿ ಮಾಡಲಾದ "ಕೋವಿಡ್-19 ಕ್ಲಿನಿಕಲ್ ಮ್ಯಾನೇಜಮೆಂಟ್ ಪ್ರೊಟೋಕಾಲ್" ಮಾರ್ಗಸೂಚಿಯ ಪ್ರಕಾರ ಡೆಕ್ಸಾಮೆಥಾಸೋನ್ ಬಳಸಲು ಸಲಹೆ ನೀಡಲಾಗಿದೆ. ಈಗಾಗಲೇ ಹಲವಾರು ಕಾಯಿಲೆಗಳ ಚಿಕಿತ್ಸೆಗಾಗಿ ಬಳಕೆಯಲ್ಲಿರುವ ಡೆಕ್ಸಾಮೆಥಾಸೋನ್ ಅನ್ನು ಮಿಥೈಲ್ ಪ್ರೆಡ್ನಿಸೋಲೋನ್ ಔಷಧಕ್ಕೆ ಪರ್ಯಾಯವಾಗಿ ಕೋವಿಡ್-19 ಚಿಕಿತ್ಸೆಗೆ ಬಳಸಬಹುದಾಗಿದೆ.
ಕೋವಿಡ್-19 ಚಿಕಿತ್ಸಾ ಕ್ರಮಗಳ ಬಗ್ಗೆ ದಿನಗಳೆದಂತೆ ಹೊಸ ಮಾಹಿತಿಗಳು ಲಭ್ಯವಾಗುತ್ತಿದ್ದು, ಅವುಗಳನ್ನಾಧರಿಸಿ ಆರೋಗ್ಯ ತಜ್ಞರ ಸಲಹೆಯಂತೆ ಕೋವಿಡ್ ಚಿಕಿತ್ಸಾ ಪದ್ಧತಿಯಲ್ಲಿ ಹೊಸ ಔಷಧಗಳನ್ನು ಸೇರ್ಪಡೆ ಮಾಡಲಾಗುತ್ತಿದೆ.
ಕೇಂದ್ರದ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ಪ್ರೀತಿ ಸೂದನ್ ಈಗಾಗಲೇ ಹೊಸ ಮಾರ್ಗಸೂಚಿಯನ್ನ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಸರ್ಕಾರಗಳಿಗೆ ಕಳುಹಿಸಿದ್ದು, ಅದರನ್ವಯ ಸರ್ಕಾರಿ ಚಿಕಿತ್ಸಾ ಸಂಸ್ಥೆಗಳಲ್ಲಿ ಡೆಕ್ಸಾಮೆಥಾಸೋನ್ ಲಭ್ಯವಿರುವಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ತುರ್ತು ಕೋವಿಡ್ ಚಿಕಿತ್ಸಾ ಸಂದರ್ಭಗಳಲ್ಲಿ ವೈರಸ್ ನಿರೋಧಕ ಔಷಧ ರೆಮ್‌ಡೆಸಿವಿರ್ ಬಳಕೆಗೆ ಈ ಮುನ್ನ ಜೂನ್ 13 ರಂದು ಆರೋಗ್ಯ ಸಚಿವಾಲಯ ಅನುಮತಿ ನೀಡಿತ್ತು. ಹಾಗೆಯೇ ಆರಂಭಿಕ ಹಂತದ ಕೋವಿಡ್ ಚಿಕಿತ್ಸೆಗೆ ಹೈಡ್ರಾಕ್ಸಿಕ್ಲೋರೊಕ್ವಿನ್ ಬಳಕೆಗೂ ಅನುಮತಿ ನೀಡಲಾಗಿದೆ. ಆದರೆ, ಕಾಯಿಲೆ ಉಲ್ಬಣಿಸಿದ ಸಂದರ್ಭಗಳಲ್ಲಿ ಇದನ್ನು ಬಳಸುವಂತಿಲ್ಲ ಎಂದು ತಿಳಿಸಲಾಗಿದೆ.