ನವದೆಹಲಿ: ದ್ವೇಷಭರಿತ ಭಾಷಣ ಮಾಡಿದ ಆರೋಪದಡಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಮತ್ತಿತರರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ವಿಚಾರಣೆ ನಡೆಸಲಿದೆ.
ವಕೀಲರು ಮುಖ್ಯ ನ್ಯಾಯಮೂರ್ತಿ ಡಿ. ಎನ್. ಪಟೇಲ್ ಮತ್ತು ನ್ಯಾ.ಸಿ.ಹರಿಶಂಕರ್ ಅವರ ನ್ಯಾಯಪೀಠದ ಮುಂದೆ ಗುರುವಾರ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಶುಕ್ರವಾರ ನಡೆಯಲಿದೆ ಎಂದು ತಿಳಿಸಲಾಗಿತ್ತು. ಅರ್ಜಿಯಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಆಮ್ ಆದ್ಮಿ ಪಕ್ಷದ ಶಾಸಕ ಅಮಾನತ್ ಉಲ್ಲಾ ಖಾನ್, ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ (ಎಐಐಐಎಂ) ಹೀಗೆ ಕೆಲವು ರಾಜಕೀಯ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಮನವಿ ಮಾಡಲಾಗಿದೆ.
ಕೆಲವು ರಾಜಕೀಯ ನಾಯಕರ ದ್ವೇಷ ಭಾಷಣಗಳಿಗೆ ಸಂಬಂಧಿಸಿದ ಹಲವಾರು ಮನವಿಗಳು ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದವು. ಹಿಂದೂ ಸೇನಾದಿಂದ ಸಲ್ಲಿಸಲಾದ ಅರ್ಜಿಯಲ್ಲಿ ಎಐಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಮತ್ತು ಅಕ್ಬರುದ್ದೀನ್ ಓವೈಸಿ ಅವರು ದ್ವೇಷದ ಭಾಷಣಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಜೊತೆಗೆ, ಎಐಐಎಂಐಎಂ ಪಕ್ಷದ ಮುಂಬೈನ ಮಾಜಿ ಶಾಸಕ ವಾರಿಸ್ ಪಠಾಣ್ ಮತ್ತು ಎಐಐಎಂ ನಾಯಕ ಅಕ್ಬರುದ್ದೀನ್ ಓವೈಸಿ ದ್ವೇಷದ ಭಾಷಣಗಳು ದೆಹಲಿಯಲ್ಲಿ ಕೋಮು ಉದ್ವೇಗ ಹೆಚ್ಚಿಸಿವೆ ಮತ್ತು ಹಲವಾರು ಜನರ ಸಾವಿಗೆ ಕಾರಣವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಈ ಎಲ್ಲಾ ಆರೋಪಗಳಿರುವ ಅರ್ಜಿಗಳಿಗೆ ಸಂಬಂಧಿಸಿದ ಹಾಗೂ ದೆಹಲಿ ಕೋಮು ಹಿಂಸಾಚಾರದಲ್ಲಿ ಗಾಯಗೊಂಡವರನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ರವಾನಿಸುವ ಹಾಗೂ ಮೃತದೇಹಗಳನ್ನು ಸಂಬಂಧಪಟ್ಟಲ್ಲಿಗೆ ತಲುಪಿಸುವ ಕುರಿತು ಇಂದು ದೆಹಲಿ ಹೈಕೋರ್ಟ್ ವಿಚಾರಣೆ ನಡೆಸಲಿದೆ.