ನವದೆಹಲಿ: ಸೋಂಕಿತ ಪತ್ರಕರ್ತನನ್ನು ಇಲ್ಲಿನ ಏಮ್ಸ್ನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಮಧ್ಯಾಹ್ನದ ವೇಳೆಯಲ್ಲಿ ಈತ ಇದ್ದಕ್ಕಿದ್ದಂತೆ ಹಾಸಿಗೆಯಿಂದೆದ್ದು ಕಟ್ಟಡದ 4ನೇ ಮಹಡಿಗೆ ಓಡಿ ಹೋಗಿ ಕಿಟಕಿಯಿಂದ ಕೆಳಕ್ಕೆ ಹಾರಿದ್ದಾನೆ ಎನ್ನಲಾಗಿದೆ. ತೀವ್ರ ರಕ್ತಸ್ರಾವದ ಹಿನ್ನೆಲೆಯಲ್ಲಿ ಆತ ಕೆಲವೇ ಹೊತ್ತಲ್ಲಿ ಕೊನೆಯುಸಿರೆಳೆದಿದ್ದ. ಮೇಲ್ನೋಟಕ್ಕೆ ಪ್ರಕರಣ ಆತ್ಮಹತ್ಯೆಯಂತೆ ಕಂಡುಬಂದರೂ ಈ ಪ್ರಕರಣದಲ್ಲಿ ಅನೇಕ ಪ್ರಶ್ನೆಗಳೆದ್ದಿವೆ.
ಮೃತ ಪತ್ರಕರ್ತನನ್ನು ತರುಣ್ ಸಿಸೋಡಿಯಾ ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ಇವರು ತಮ್ಮ ಪತ್ರಿಕೆಯಲ್ಲಿ ಆತ್ಮಹತ್ಯೆಯ ಕುರಿತು ವಿಶೇಷ ಲೇಖನ ಬರೆದಿದ್ದರು. ಇದರಲ್ಲಿ ಜನರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದ್ದರು. ಅಂತಹ ಲೇಖನ ಬರೆದಿದ್ದ ಪತ್ರಕರ್ತನೇ ಇದೀಗ ಆತ್ಮಹತ್ಯೆಗೆ ಶರಣಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಈ ನಡುವೆ ತರುಣ್ ಸಿಸೋಡಿಯಾ ಅವರ ಸಂದೇಶವೊಂದು ಪತ್ರಕರ್ತರ ಅನೇಕ ವಾಟ್ಸ್‌ಆ್ಯಪ್ ಗುಂಪುಗಳಲ್ಲಿ ವೈರಲ್ ಆಗುತ್ತಿದೆ. ಈ ಸಂದೇಶದಲ್ಲಿ, ತರುಣ್ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದಾರೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಟ್ವೀಟ್ ಮಾಡಿ, ಪತ್ರಕರ್ತನ ಕುಟುಂಬಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ತಕ್ಷಣ ತನಿಖೆ ನಡೆಸಲು ತ್ವರಿತ ಆಂತರಿಕ ವಿಚಾರಣಾ ಸಮಿತಿಯನ್ನು ರಚಿಸುವಂತೆ ಅವರು ಏಮ್ಸ್ ನಿರ್ದೇಶಕರಿಗೆ ಆದೇಶಿಸಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ 48 ಗಂಟೆಗಳೊಳಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.