ಜಿನೀವಾ: ಕೋವಿಡ್-19 ಲಾಕ್ಡೌನ್ನಿಂದಾಗಿ ರೋಗನಿರೋಧಕ ಲಸಿಕಾಕರಣ (ವ್ಯಾಕ್ಸಿನೇಶನ್) ಕಾರ್ಯಕ್ರಮಗಳನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಅತ್ಯಂತ ಸುರಕ್ಷಿತ ಹಾಗೂ ಪರಿಣಾಮಕಾರಿ ವ್ಯಾಕ್ಸಿನ್ಗಳ ಮೂಲಕ ಇಷ್ಟು ದಿನ ತಡೆಗಟ್ಟಲಾದ ರೋಗಗಳು ಮರುಕಳಿಸುವ ಸಾಧ್ಯತೆಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಏ.24 ರಿಂದ 30 ರವರೆಗೆ ವಿಶ್ವ ರೋಗ ನಿರೋಧಕ ಲಸಿಕಾಕರಣ ಸಪ್ತಾಹ ಆಚರಿಸಲಾಗುತ್ತಿರುವ ಸಂದರ್ಭದಲ್ಲಿಯೇ ಡಬ್ಲ್ಯೂಎಚ್ಓ ಎಚ್ಚರಿಕೆ ನೀಡಿದೆ.
ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ಅತಿ ಸಣ್ಣ ಅವಧಿಗೆ ರೋಗನಿರೋಧಕ ಲಸಿಕಾಕರಣ ಕಾರ್ಯಕ್ರಮಗಳನ್ನು ನಿಲ್ಲಿಸಿದರೂ ವ್ಯಾಕ್ಸಿನ್ಗಳಿಂದ ತಡೆಗಟ್ಟಬಹುದಾದ ದಡಾರ, ಪೋಲಿಯೊ ಮುಂತಾದ ಸಾಂಕ್ರಾಮಿಕ ರೋಗಗಳು ಮರುಕಳಿಸಬಹುದು. ಕಳೆದ ವರ್ಷ ಕಾಂಗೊ ದೇಶದಲ್ಲಿ ವ್ಯಾಪಕವಾಗಿ ಹರಡಿದ್ದ ದಡಾರ ರೋಗಕ್ಕೆ 6 ಸಾವಿರ ಜನ ಬಲಿಯಾಗಿದ್ದರು. ಈಗ ಅಲ್ಲಿ ಎಬೋಲಾ ಸಾಂಕ್ರಾಮಿಕ ವೈರಸ್ ಹರಡುತ್ತಿರುವುದು ಎಚ್ಚರಿಕೆಯ ಗಂಟೆಯಾಗಿದೆ. ಎಂಥದೇ ಸಮಯದಲ್ಲಿಯೂ ರೋಗ ನಿರೋಧಕ ಲಸಿಕಾಕರಣದ ಆರೋಗ್ಯ ಸೇವೆಗಳನ್ನು ನಿಲ್ಲಿಸಕೂಡದು ಎಂಬುದು ಇದರಿಂದ ಅರ್ಥವಾಗುತ್ತದೆ. ಒಂದೊಮ್ಮೆ ಬೇರೆ ರೋಗಗಳು ಕಾಣಿಸಿಕೊಂಡಲ್ಲಿ ಕೋವಿಡ್-19 ನೊಂದಿಗೆ ಹೋರಾಡುತ್ತಿರುವ ವ್ಯವಸ್ಥೆಯ ಮೇಲೆ ತಡೆಯಲಾಗದ ಪ್ರತಿಕೂಲ ಪರಿಣಾಮ ಬೀರುತ್ತದೆ.
"ಮಹಾಮಾರಿಗಳಿಂದ ಸುರಕ್ಷಿತವಾಗಿರಲು ವ್ಯಾಕ್ಸಿನ್ ಹಾಗೂ ಔಷಧಿಗಳು ಲಭ್ಯವಿರುವಾಗ ಅಂಥ ರೋಗಗಳು ಮರುಕಳಿಸುವಂತಾಗಬಾರದು. ಕೋವಿಡ್-19ಗೆ ವ್ಯಾಕ್ಸಿನ್ ತಯಾರಿಸಲು ಜಗತ್ತು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ಆದರೆ ಈ ಮಧ್ಯೆ ವ್ಯಾಕ್ಸಿನ್ನಿಂದ ತಡೆಯಬಹುದಾದ ರೋಗಗಳು ಮರುಕಳಿಸುವ ಅಪಾಯವನ್ನು ಎದುರು ಹಾಕಿಕೊಳ್ಳಬಾರದು. ನಿಯಮಿತ ವ್ಯಾಕ್ಸಿನೇಶನ್ ನಿಲ್ಲಿಸಿದಲ್ಲಿ ಸಾಂಕ್ರಾಮಿಕ ರೋಗಗಳು ಶರವೇಗದಲ್ಲಿ ವಾಪಸ್ ಬರಬಹುದು." ಎನ್ನುತ್ತಾರೆ ಡಬ್ಲ್ಯೂಎಚ್ಓ ಮುಖ್ಯಸ್ಥ ಡಾ. ಟೆಡ್ರೋಸ್ ಅಧನೋಮ್ ಘೆಬ್ರೆಯೆಸಸ್.
ಕೋವಿಡ್-19 ತಡೆಗಾಗಿ ಸುರಕ್ಷಿತ ಹಾಗೂ ಪರಿಣಾಮಕಾರಿ ವ್ಯಾಕ್ಸಿನ್ ಅಭಿವೃದ್ಧಿಪಡಿಸಲು ಹಲವಾರು ಪಾಲುದಾರರೊಂದಿಗೆ ಡಬ್ಲ್ಯೂಎಚ್ಓ ಕೆಲಸ ಮಾಡುತ್ತಿದ್ದು, ವಿಶ್ವದ ಎಲ್ಲರಿಗೂ ಸಮಾನವಾಗಿ ವ್ಯಾಕ್ಸಿನ್ ದೊರಕುವಂತಾಗಲು ಪ್ರಯತ್ನಿಸಲಾಗುತ್ತಿದೆ.
ಎಷ್ಟೇ ವೇಗವಾಗಿ ಕೆಲಸ ಮಾಡಿದರೂ ಕೋವಿಡ್-19 ವ್ಯಾಕ್ಸಿನ್ ಅಭಿವೃದ್ಧಿಗೆ ಸಾಕಷ್ಟು ಸಮಯ ಹಿಡಿಯುತ್ತದೆ. ಅಲ್ಲಿಯವರೆಗೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಸುರಕ್ಷಿತವಾಗಿರಬೇಕಾಗುತ್ತದೆ. ಜೊತೆಗೆ ಈಗಾಗಲೇ ಇರುವ ವ್ಯಾಕ್ಸಿನ್ಗಳ ಮೂಲಕ ಎಲ್ಲರನ್ನೂ ಸುರಕ್ಷಿತವಾಗಿರಿಸಬೇಕಿದೆ.
ವ್ಯಾಕ್ಸಿನೇಶನ್ ವಂಚಿತ ಜನಸಮೂಹ
ಮಕ್ಕಳಿಗೆ ಸಾಂಕ್ರಾಮಿಕ ರೋಗಗಳು ಬರದಂತೆ ತಡೆಗಟ್ಟಲು ನಡೆಸಲಾಗುವ ವ್ಯಾಕ್ಸಿನ್ ಕಾರ್ಯಕ್ರಮಗಳು ಬಹಳಷ್ಟು ಯಶಸ್ವಿಯಾಗಿವೆ. 2018 ರಲ್ಲಿ 5 ವರ್ಷದೊಳಗಿನ ಶೇ.86 ರಷ್ಟು ಮಕ್ಕಳಿಗೆ ಡಿಫ್ತೀರಿಯಾ, ಟೆಟನಸ್, ಪೆರ್ಟುಸಿಸ್ (DTP3) ಮತ್ತು ಒಂದು ಹನಿ ದಡಾರ ವ್ಯಾಕ್ಸಿನ್ ಹಾಕಲಾಗಿದೆ. ಪೋಲಿಯೊ ಪ್ರಕರಣಗಳು ವಿಶ್ವಾದ್ಯಂತ ಶೇ.99.9 ರಷ್ಟು ಕಡಿಮೆಯಾಗಿವೆ. ಆದಾಗ್ಯೂ ಎಲ್ಲ ಮಕ್ಕಳನ್ನು ಸಾಂಕ್ರಾಮಿಕ ರೋಗಗಳಿಂದ ತಡೆಗಟ್ಟಲು ಶೇ.95 ರಷ್ಟು ವ್ಯಾಕ್ಸಿನೇಶನ್ ಗುರಿ ಸಾಧಿಸಬೇಕಿದೆ.
2018ರಲ್ಲಿ ವಿಶ್ವಾದ್ಯಂತ 20 ಮಿಲಿಯನ್ ಮಕ್ಕಳು ಅಂದರೆ ಪ್ರತಿ ಹತ್ತರಲ್ಲಿ ಓರ್ವ ಮಗು ಜೀವರಕ್ಷಕ ವ್ಯಾಕ್ಸಿನ್ನಿಂದ ವಂಚಿತವಾಗಿದೆ. ಹಾಗೆಯೇ 13 ಮಿಲಿಯನ್ ಮಕ್ಕಳಿಗೆ ಯಾವುದೇ ವ್ಯಾಕ್ಸಿನ್ ಹಾಕಲಾಗಿಲ್ಲ. ಇಂಥ ಮಕ್ಕಳಿಗೆ ಹಾಗೂ ಈ ಮಕ್ಕಳ ಸಮುದಾಯದಲ್ಲಿ ರೋಗ ಹರಡುವ ಹಾಗೂ ಮರಣ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಅತ್ಯಂತ ಕಳಪೆ ಆರೋಗ್ಯ ವ್ಯವಸ್ಥೆ ಹೊಂದಿದ ದೇಶಗಳಲ್ಲಿ ವಾಸಿಸುವ ಈ ಮಕ್ಕಳಿಗೆ ಅನಾರೋಗ್ಯ ಉಂಟಾದಲ್ಲಿ ಅಪಾಯ ಮತ್ತೂ ಹೆಚ್ಚಾಗುತ್ತದೆ.
ವ್ಯಾಕ್ಸಿನೇಶನ್ ದರ ಕುಸಿದಲ್ಲಿ ದಡಾರ ಮರುಕಳಿಸುವ ಸಾಧ್ಯತೆ ಯಾವಾಗಲೂ ಇರುತ್ತದೆ. ಈಗಿನ ಲೆಕ್ಕಾಚಾರದ ಪ್ರಕಾರ 2019 ರಲ್ಲಿ ಸುಮಾರು 8 ಲಕ್ಷ ಜನ ದಡಾರ್ ವೈರಸ್ಗೆ ತುತ್ತಾಗಿದ್ದಾರೆ. ಈಗ 2020 ರಲ್ಲಿ ಕೋವಿಡ್ ಸಂಕಷ್ಟದ ಕಾರಣದಿಂದ ವ್ಯಾಕ್ಸಿನೇಶನ್ ಪ್ರಮಾಣ ಕಡಿಮೆಯಾದಲ್ಲಿ ರೋಗ ಮರುಕಳಿಸುವ ಸಾಧ್ಯತೆಗಳು ಇನ್ನೂ ಹೆಚ್ಚಾಗಲಿವೆ. ಕೆಲ ದೇಶಗಳಲ್ಲಿ ಪೋಲಿಯೊ, ಡಿಫ್ತೀರಿಯಾ ಮತ್ತು ಹಳದಿ ಜ್ವರ ಸಾಂಕ್ರಾಮಿಕಗಳ ಹಾವಳಿ ಉಲ್ಬಣಿಸಬಹುದು.
ಕೋವಿಡ್ ಸಮಯದಲ್ಲಿ ವ್ಯಾಕ್ಸಿನೇಶನ್ ಮುಂದುವರಿಕೆ
ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಮಧ್ಯೆ ಇತರ ರೋಗಗಳು ಬರದಂತೆ ವ್ಯಾಕ್ಸಿನೇಶನ್ ಕಾರ್ಯಕ್ರಮಗಳನ್ನು ರಾಷ್ಟ್ರಗಳು ಸುಸೂತ್ರವಾಗಿ ಮುಂದುವರಿಸಿಕೊಂಡು ಹೋಗಬೇಕಿದೆ. ಆಯಾ ರಾಷ್ಟ್ರೀಯ ಲಸಿಕಾ ನೀತಿಗನುಸಾರ ತಮ್ಮ ಮಕ್ಕಳಿಗೆ ಸೂಕ್ತ ಲಸಿಕೆ ಹಾಕಿಸುವಂತೆ ಪಾಲಕರು ಗಮನಹರಿಸುವುದು ಅಗತ್ಯ. ವ್ಯಾಕ್ಸಿನ್ನಿಂದ ತಡೆಗಟ್ಟಬಹುದಾದ ರೋಗಗಳ ಹರಡುವಿಕೆ ಇಲ್ಲದಿರುವ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ವ್ಯಾಕ್ಸಿನೇಶನ್ ನಿಲ್ಲಿಸಬಹುದು. ಆದಾಗ್ಯೂ ಮಕ್ಕಳ ವ್ಯಾಕ್ಸಿನೇಶನ್ ಕಾರ್ಯಕ್ರಮಗಳನ್ನು ಅಗತ್ಯ ವಸ್ತುಗಳ ಸೂಚಿಯಲ್ಲಿಟ್ಟು ಅವನ್ನು ಮುಂದುವರಿಸಬೇಕೆಂದು ಡಬ್ಲ್ಯೂಎಚ್ಓ ಒತ್ತಾಯ ಮಾಡಿದೆ. ಒಂದೊಮ್ಮೆ ವ್ಯಾಕ್ಸಿನೇಶನ್ ನಿಲ್ಲಿಸಿದಲ್ಲಿ ಆದಷ್ಟು ಶೀಘ್ರ ತುರ್ತು ವ್ಯಾಕ್ಸಿನೇಶನ್ ಕಾರ್ಯಕ್ರಮಗಳನ್ನು ಆರಂಭಿಸಬೇಕೆಂದು ಡಬ್ಲ್ಯೂಎಚ್ಓ ಹೇಳಿದೆ.