ತಿರುವನಂತಪುರ: ಸಿಎಎ ಜಾರಿಗೆ ತರುತ್ತೇವೆ ಎನ್ನುತ್ತಿರುವ ಬಿಜೆಪಿ ನಿರ್ಧಾರಕ್ಕೆ ದೇಶದ 13 ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.
ಕೇರಳದಲ್ಲಿ 'ಈ ಟಿವಿ ಭಾರತ್' ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಸಿಎಎ ಜಾರಿಯ ಬಗ್ಗೆ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ, ರಾಜಸ್ಥಾನ, ಕೇರಳ, ಮಧ್ಯಪ್ರದೇಶ, ಆಂಧ್ರಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಕೂಡ ಇದಕ್ಕೆ ಬೆಂಬಲ ನೀಡುವುದಿಲ್ಲ ಎಂದರು.
ನಲವತ್ತು ವರ್ಷದಿಂದ ಪ್ರಾದೇಶಿಕ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಸಾಕಷ್ಟು ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ. ಆರಂಭಿಕ ದಿನಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳ ವಿರುದ್ಧ ಅವಿರತ ಹೋರಾಟ ನಡೆಸಿದ್ದೇನೆ. ಮುಂದಿಯೂ ನಮ್ಮ ಹೋರಾಟ ಹೀಗೆ ಮುಂದುವರಿಯುತ್ತದೆ. ಇದರಲ್ಲಿ ರಾಜಿ ಆಗುವ ಪ್ರಶ್ನೆಯೇ ಇಲ್ಲ. ನನ್ನ ರಾಜಕೀಯ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ ಎಂದರು.
ಮಂಗಳೂರಿನ ಗಲಭೆಗೆ ಕೇರಳ ರಾಜ್ಯದವರು ಕಾರಣವೆಂಬುದು ಬಿಜೆಪಿಯ ಕೆಟ್ಟ ನಿರ್ಧಾರ. ಬಹಳಷ್ಟು ಕೇರಳಿಗರು ಈ ಭಾಗದಲ್ಲಿ ವಾಸಿಸುತ್ತಿದ್ದಾರೆ. ಈ ಗಲಭೆಗೆ ಅವರು ಕಾರಣವೆಂಬುದು 1 ಪ್ರತಿಶತದಷ್ಟೂ ಉರುಳಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಮಂಗಳೂರು, ಉಡುಪಿಯಲ್ಲಿ ಇಂತಹ ಸಮಸ್ಯೆ ಸೃಷ್ಟಿಯಾಗುವುದು ಸಾಮಾನ್ಯವಾಗಿದೆ. ಈಗ ನಡೆದ ಗಲಭೆಗೂ ಅವರೇ ಕಾರಣ ಎಂದು ಆಪಾದಿಸಿದರು.