ನವದೆಹಲಿ: ಹಿಮಾಲಯದ ಚಮೋಲಿ ಜಿಲ್ಲೆಯ ಔಲಿಯಲ್ಲಿರುವ ಸ್ಕಿ ರೆಸಾರ್ಟ್ನಲ್ಲಿ ಸಿರಿವಂತ ಕುಟುಂಬವೊಂದರ ಮದುವೆ ನಡೆಯುತ್ತಿದೆ. ಗುಪ್ತ ಕುಟುಂಬದ ಇಬ್ಬರು ವಾರಸುದಾರರ ಮದುವೆ ಇದಾಗಿದ್ದು ಇದರ ಬಜೆಟ್ ಬರೋಬ್ಬರಿ 100 ಕೋಟಿ..!
ಈ ಮದುವೆಯ ವೆಡ್ಡಿಂಗ್ ಕಾರ್ಡ್ ಬೆಲೆ ಕೇಳಿದ್ರೆ ಬೆಚ್ಚಿ ಬೀಳೋದು ಪಕ್ಕಾ..! ಬರೋಬ್ಬರಿ 2 ಕೆಜಿ ಬೆಳ್ಳಿಯಿಂದ ಮಾಡಿರುವ ಈ ಲಗ್ನ ಪತ್ರಿಕೆಯನ್ನು ಪಾಲ್ಗೊಳ್ಳಲಿರುವ ತಮ್ಮ ಆಪ್ತರಿಗೆ ಗುಪ್ತಾ ಫ್ಯಾಮಿಲಿ ನೀಡುತ್ತಿದೆ. ಒಂದು ಮೂಲದ ಪ್ರಕಾರ ಭಾರತದಲ್ಲಿಈವರೆಗೆ ಮುದ್ರಿತವಾಗಿರುವ ಅತಿ ಹೆಚ್ಚು ಬೆಲೆಯ ವೆಡ್ಡಿಂಗ್ ಕಾರ್ಡ್ ಇದೇ ಎನ್ನಲಾಗಿದೆ.
ಈ ವೆಡ್ಡಿಂಗ್ ಕಾರ್ಡ್ ಇರುವ ಕೆಂಪು ಬಣ್ದದ ಬಾಕ್ಸ್ ತೆರೆದರೆ ಒಳಗಡೆ ಚಂದನೆಯ ಕೆತ್ತನೆ ಮಾಡಿರುವ ಇನ್ನೊಂದು ಬೆಳ್ಳಿಯ ಡಬ್ಬಿ ಇದೆ. ಆ ಬಾಕ್ಸ್ ತೆರೆದರೆ ಬೆಳ್ಳಿಯ ಕಾರ್ಡ್ ಮೇಲೆ ಮುದ್ರಿಸಲಾಗಿರುವ ವೆಡ್ಡಿಂಗ್ ಕಾರ್ಡ್ ಸಿಗುತ್ತದೆ. ಒಂದು ಕಾರ್ಡ್ ಹಿಂದಿಯಲ್ಲಿದ್ದರೆ ಇನ್ನೊಂದು ಕಾರ್ಡ್ ಇಂಗ್ಲಿಷ್ನಲ್ಲಿದೆ.
ಅದೇ ಬಾಕ್ಸ್ನ ಇನ್ನೊಂದು ಮೂಲೆಯಲ್ಲಿ ಬಾದಾಮಿ, ಖರ್ಜೂರ, ಗೋಡಂಬಿ ಸೇರಿದಂತೆ ಒಣ ಹಣ್ಣುಗಳಿವೆ. ಜೂನ್ 18ರಿಂದ ನಾಲ್ಕು ದಿನಗಳ ಕಾಲ ಈ ಮದುವೆ ನಡೆಯಲಿದ್ದು, ಅಜಯ್ ಗುಪ್ತಾ ಅವರ ಪುತ್ರ ಸೂರ್ಯಕಾಂತ್ ಹಾಗೂ ಅತುಲ್ ಗುಪ್ತಾ ಅವರ ಪುತ್ರ ಶಶಾಂಕ್ ಹಸೆಮಣೆ ಏರುತ್ತಿದ್ದಾರೆ.
ಅಂದಹಾಗೆ 150 ವಿಶೇಷ ಅತಿಥಿಗಳನ್ನು ಕರೆದೊಯ್ಯಲು ಹೆಲಿಕಾಪ್ಟರ್ಗಳನ್ನು ಬುಕ್ ಮಾಡಲಾಗಿದ್ದು, ವಿವಾಹಕ್ಕಾಗಿ ಒಂದು ಕೃತಕ ಕೆರೆಯನ್ನೇ ನಿರ್ಮಿಸಲಾಗಿದೆ.