ಅಹಮದಾಬಾದ್: 2006ರಲ್ಲಿ ಅಹಮದಾಬಾದ್ ಕಲುಪುರ ರೈಲ್ವೆ ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಗುರುವಾರ ಬಂಧಿಸಿದೆ.
ಲಷ್ಕರ್ - ಇ - ತೊಯಿಬಾ (ಎಲ್‌ಇಟಿ) ಸಂಘಟನೆಯ ಶಂಕಿತ ಉಗ್ರ ಅಬ್ದುಲ್ ರಾಝಾ ಗಾಜಿ 14 ವರ್ಷಗಳ ಹಿಂದೆ ಈ ಕೃತ್ಯವೆಸಗಿ ಪರಾರಿಯಾಗಿದ್ದನು. ಇದೀಗ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಅಧಿಕಾರಿಗಳು, ಬಾಂಗ್ಲಾದೇಶದ ಗಡಿಯಾಗಿರುವ ಪಶ್ಚಿಮ ಬಂಗಾಳದ ಪುಟ್ಟ ಹಳ್ಳಿಯಲ್ಲಿ ಈತನನ್ನು ಬಂಧಿಸಿದ್ದಾರೆ ಎಂದು ಎಟಿಎಸ್ ಗುಜರಾತ್‌ನ ಎಸ್‌ಪಿ ಇಮ್ತಿಯಾಜ್ ಶೇಖ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ರಾಝಾ ಗಾಜಿ ಎಲ್ಇಟಿಯೊಂದಿಗೆ ಸಂಬಂಧ ಹೊಂದಿದ್ದು, ಇತರ ಉಗ್ರರಿಗೂ ಆಶ್ರಯ ನೀಡಿದ್ದ ಎನ್ನಲಾಗಿದೆ. ಎಟಿಎಸ್ ಪ್ರಕಾರ, ಗಾಜಿ ಲಷ್ಕರ್-ಇ-ತೊಯಿಬಾ (ಎಲ್‌ಇಟಿ) ಕಾರ್ಯಕರ್ತರಾದ ಜುಲ್ಫಿಕರ್ ಕಾಗ್ಜಿ ಮತ್ತು ಅಬು ಜುಂಡಾಲ್ರಿಗೆ ಆಶ್ರಯ ನೀಡಿದ್ದ ಎಂಬ ಮಾಹಿತಿ ತಿಳಿದು ಬಂದಿದೆ.
2006ರ ಫೆಬ್ರವರಿಯಲ್ಲಿ ಕಲುಪುರ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 2 ಮತ್ತು 3ರ ನಡುವೆ ಬಾಂಬ್ ಹಾಕಿದ್ದ ಆರೋಪದಲ್ಲಿ ಶಂಕಿತ ಉಗ್ರ ಅಬ್ದುಲ್ ರಾಝಾ ಗಾಜಿಯನ್ನು ಬಂಧಿಸಲಾಗಿದೆ. ಈ ಸ್ಪೋಟದಲ್ಲಿ ಅನೇಕರು ಗಾಯಗೊಂಡಿದ್ದರು.
2002 ಗೋಧ್ರಾ ಗಲಭೆಗೆ ಸೇಡು ತೀರಿಸಿಕೊಳ್ಳಲು ಕಾಗ್ಜಿ, ಜುಂಡಾಲ್, ಸಿಮಿ ಮತ್ತು ಎಲ್‌ಇಟಿಯ ಇತರ ಸದಸ್ಯರು ಬಾಂಬ್ ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ. ಎಂದು ಆರೋಪಿಸಲಾಗಿದೆ ಎಂದು ಎಟಿಎಸ್ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ಘಟನೆ ನಡೆದ ನಂತರ ಕಾಗ್ಜಿ ಮತ್ತು ಜುಂಡಾಲ್ಗೆ ಆಶ್ರಯ ನೀಡುವುದರ ಜೊತೆಗೆ, ಬಾಂಗ್ಲಾದೇಶ ಗಡಿ ದಾಟಲು ಗಾಜಿ ಸಹಕರಿಸಿದ್ದ. ಈ ನಂತರ ಇವರಿಬ್ಬರು ಬಾಂಗ್ಲಾದೇಶದಿಂದ ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದಾರೆ ಎಂದು ಎಟಿಎಸ್ ತಿಳಿಸಿದೆ.