ನವದೆಹಲಿ: ಗುಜರಾತ್ ಗಲಭೆ ಸಂಬಂಧ ಮೋದಿಗೆ ಎಸ್‌ಐಟಿ ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಏಪ್ರಿಲ್ 14ಕ್ಕೆ ಮುಂದೂಡಲಾಗಿದೆ.
2002ರಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಅಂದಿನ ಸಿಎಂ ಆಗಿದ್ದ ನರೇಂದ್ರ ಮೋದಿಗೆ ಕ್ಲೀನ್‌ಚಿಟ್ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಗಲಭೆಯಲ್ಲಿ ಹತ್ಯೆಗೀಡಾಗಿದ್ದ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ನ್ಯಾಯಪೀಠವು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದೆ. ವಕೀಲೆ ಅಪರ್ಣಾ ಭಟ್ ವಿಚಾರಣೆ ಮುಂದೂಡಿದ್ದನ್ನು ಪ್ರಶ್ನಿಸಿ ಈ ವಿಷಯವು ವಿವಾದಾಸ್ಪದವಾಗಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ಈ ವಿಚಾರಣೆಯನ್ನು ಹಲವು ಬಾರಿ ಮುಂದೂಡಲಾಗಿದೆ. ಅದು ಏನೇ ಇರಲಿ, ನಾವು ಒಂದು ದಿನ ನ್ಯಾಯ ಹೇಳಲೇ ಬೇಕಾಗುತ್ತದೆ ಎಂದು ತಿಳಿಸಿತು.
ಹೆಚ್ಚಿನ ಓದಿಗಾಗಿ: ಗೋದ್ರಾ ಹತ್ಯಾಕಾಂಡ ಪ್ರಕರಣ: ಪ್ರಧಾನಿ ನರೇಂದ್ರ ಮೋದಿಗೆ ಸಿಕ್ತು ಕ್ಲೀನ್ ಚಿಟ್!
ಫೆಬ್ರವರಿ 28, 2002 ರಂದು ಗುಲ್ಬರ್ಗ್ ಸೊಸೈಟಿಯಲ್ಲಿ ಕೊಲ್ಲಲ್ಪಟ್ಟ 68 ಜನರಲ್ಲಿ ಎಹ್ಸಾನ್ ಜಾಫ್ರಿ ಕೂಡ ಸೇರಿದ್ದರು. ಇದಾದ ನಂತರ ಗೋಧ್ರಾದಲ್ಲಿ ಸಬರಮತಿ ಎಕ್ಸ್‌ಪ್ರೆಸ್‌ನ S -6 ಕೋಚ್ಗೆ ಬೆಂಕಿ ಹಚ್ಚಲಾಗಿತ್ತು. ಆ ವೇಳೆ 59 ಜನರು ಸಾವನ್ನಪ್ಪಿದ್ದರು. ಘಟನೆ ಸಂಬಂಧ ಯಾವುದೇ ರೀತಿಯ ಆಧಾರಗಳು ಇಲ್ಲ ಎಂದು ಫೆಬ್ರವರಿ 8, 2012 ರಂದು ವಿಶೇಷ ತನಿಖಾ ತಂಡವು ಮೋದಿ ಮತ್ತು ಹಿರಿಯ ಸರ್ಕಾರಿ ಅಧಿಕಾರಿಗಳು ಸೇರಿ 63 ಮಂದಿಗೆ ಕ್ಲೀನ್‌ಚಿಟ್ ನೀಡಿ ಪ್ರಕರಣ ಮುಚ್ಚಿಹಾಕಿತ್ತು.
ಎಸ್‌ಐಟಿ ಕ್ರಮದ ವಿರುದ್ಧ ಗುಜರಾತ್ ಹೈಕೋರ್ಟ್ನಲ್ಲಿ ಅಕ್ಟೋಬರ್ 5, 2017 ರಂದು ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಆದರೆ, ಈ ಅರ್ಜಿಯನ್ನು ತಿರಸ್ಕರಿಸಿದ ಗುಜರಾತ್ ಹೈಕೋರ್ಟ್‌ನ ವಿರುದ್ಧ ಜಾಕಿಯಾ ಜಾಫ್ರಿ 2018 ರಲ್ಲಿ ಸುಪ್ರೀಂಕೋರ್ಟ್‌ಗೆ ಹೋಗಿದ್ದರು. ಅಂದಿನಿಂದ ಈವರೆಗೂ ಈ ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.