ನವದೆಹಲಿ : 2021 ಹೊಸ ವರ್ಷದ ಆರಂಭದಲ್ಲಿ ದೇಶದ ಜನರಿಗೆ ಡಿಸಿಜಿಐ ಸಿಹಿ ಸುದ್ದಿ ನೀಡಿದೆ. ತುರ್ತು ಸಂದರ್ಭಗಳಲ್ಲಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಬಳಕೆಗೆ ಅನುಮತಿ ನೀಡಿದೆ.
ಇಂದು ನವದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡಿಸಿಜಿಐ ಅಧ್ಯಕ್ಷ ಸಿ ಜಿ ಸೋಮಾನಿ, ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‌ನ ಲಸಿಕೆಗಳನ್ನು ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗೆ ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ ಅಡಿಯಲ್ಲಿ ಬರುವ ವಿಷಯ ತಜ್ಞರ ಕಮಿಟಿಯು ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಬಳಕೆಗೆ ಅನುಮತಿಸುವಂತೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಶಿಫಾರಸು ಮಾಡಿತ್ತು. ಜನವರಿ 1ರಂದು ಕೋವಿಶೀಲ್ಡ್ ಬಳಕೆ ಬಗ್ಗೆ ಹಾಗೂ ಜನವರಿ 2ರಂದು ಕೋವ್ಯಾಕ್ಸಿನ್ ಬಳಕೆಯ ಕುರಿತು ವಿಷಯ ತಜ್ಞರ ಸಮಿತಿ ಶಿಫಾರಸು ಮಾಡಿತ್ತು.
ಇದನ್ನು ಓದಿ: 'ಚುನಾವಣೆ ಪ್ರಕ್ರಿಯೆಯಂತೆ ಬೂತ್ ಮಟ್ಟದಲ್ಲಿ ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್'
ಬ್ರಿಟನ್ನಿನ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಹಾಗೂ ದೈತ್ಯ ಫಾರ್ಮಾ ಸಂಸ್ಥೆ ಆಸ್ಟ್ರಾಜೆನಿಕಾದ ವಿಜ್ಞಾನಿಗಳ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಭಾರತದಲ್ಲಿ ಪ್ರಯೋಗ ಮಾಡುತ್ತಿದೆ.
ದೇಶದಲ್ಲಿ ಇದರ ಬಳಕೆಗೆ ಜನವರಿ 1ರಂದು ವಿಷಯ ತಜ್ಞರ ಸಮಿತಿ ಶಿಫಾರಸು ಮಾಡಿತ್ತು. ಭಾರತ್ ಬಯೋಟೆಕ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಬಳಕೆಗೆ ಜನವರಿ 2ರಂದು ಶಿಫಾರಸು ಮಾಡಿತ್ತು.
ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ಗಳನ್ನು ಪಡೆದ ಬಳಿಕ ಆಗುವ ಪರಿಣಾಮ ಹಾಗೂ ಸುರಕ್ಷತೆ ಬಗ್ಗೆ ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳು ವಿಷಯ ತಜ್ಞರ ಸಮಿತಿ ಎದುರು ಮಾಹಿತಿ ಸಲ್ಲಿಸಿದ್ದವು. ಬಳಿಕ ವಿಷಯ ತಜ್ಞರ ಸಮಿತಿ ಡಿಸಿಜಿಐಗೆ ಲಸಿಕೆ ಬಳಕೆಗೆ ಅನುಮತಿ ನೀಡುವಂತೆ ಶಿಫಾರಸು ಮಾಡಿತ್ತು.
ಭಾರತದ ಲಸಿಕೆ ಪ್ರಗತಿಯನ್ನು ಶ್ಲಾಘಿಸಿದ WHO : ಲಸಿಕೆಗಳ ಅಭಿವೃದ್ಧಿಗೆ ಭಾರತದ ಪ್ರಯತ್ನಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ. ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅನುಮತಿಸಿದ ಭಾರತದ ನಿರ್ಧಾರವನ್ನು WHO ಸ್ವಾಗತಿಸುತ್ತದೆ. ಭಾರತ ಇಂದು ತೆಗೆದುಕೊಂಡ ಈ ನಿರ್ಧಾರವು ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ.
ಇದನ್ನು ಓದಿ: ಲಸಿಕೆಗಳು 100% ಸುರಕ್ಷಿತ, ಕೆಲ ಅಡ್ಡಪರಿಣಾಮ ಸಾಮಾನ್ಯ : ಡಿಸಿಜಿಐ ಅಧ್ಯಕ್ಷ ಸೋಮಾನಿ
ಕೋವಿಡ್-19ರ ಪರಿಣಾಮವನ್ನು ಕಡಿಮೆ ಮಾಡುವಲ್ಲಿ ಆದ್ಯತೆಯ ಜನಸಂಖ್ಯೆಯಲ್ಲಿ ಲಸಿಕೆಗಳ ಬಳಕೆ, ಇತರ ಸಾರ್ವಜನಿಕ ಆರೋಗ್ಯ ಕ್ರಮಗಳ ನಿರಂತರ ಅನುಷ್ಠಾನ ಮತ್ತು ಸಮುದಾಯದ ಸಹಭಾಗಿತ್ವವು ಮಹತ್ವದ್ದಾಗಿದೆ ಎಂದು WHO ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕ ಡಾ. ಪೂನಂ ಖೇತ್ರಪಾಲ್ ಸಿಂಗ್ ಹೇಳಿದರು.