ನವದೆಹಲಿ: ಗಡಿಯಲ್ಲಿ ಭಾರತದೊಂದಿಗೆ ಕಾಲು ಕೆದರಿಕೊಂಡು ಜಗಳಕ್ಕೆ ಬರುತ್ತಿರುವ ಚೀನಾ ವಿರುದ್ಧ ಕೇಂದ್ರ ಸರ್ಕಾರ ಸಮರ ಸಾರಿದ್ದು, ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ.
ಕಳೆದ ಕೆಲ ದಿನಗಳ ಹಿಂದೆ ಟಿಕ್ಟಾಕ್ ಸೇರಿದಂತೆ 59 ಚೀನಾ ಆ್ಯಪ್ ಬ್ಯಾನ್ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೊಮ್ಮೆ ಅಂತಹದ್ದೇ ಮತ್ತೊಂದು ನಿರ್ಧಾರಕ್ಕೆ ಕೈಹಾಕಿದೆ. ಡ್ರ್ಯಾಗನ್ ರಾಷ್ಟ್ರದ 47 ಆಪ್ಲಿಕೇಶನ್ಗಳ ಮೇಲೆ ನಿಷೇಧ ಹೇರಿ ಹೊಸದಾಗಿ ಆದೇಶ ಹೊರ ಹಾಕಿದೆ.
ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವ ರವಿಶಂಕರ್ ಪ್ರಸಾದ್ ಮಾಹಿತಿ ನೀಡಿದ್ದು, ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ. ಪ್ರಮುಖವಾಗಿ ಇದೀಗ ಬ್ಯಾನ್ ಆಗಿರುವ ಆ್ಯಪ್ಗಳಲ್ಲಿ ಟಿಕ್ಟಾಕ್ ಲೈಟ್, ಹೆಲೋ ಲೈಟ್, ಶೇರ್ ಇಟ್ ಲೈಟ್, ಬಿಗೊ ಲೈವ್ ಲೈಟ್ ಸೇರಿಕೊಂಡಿವೆ.
ಚೀನಾದ ಒಟ್ಟು 275 ಅಪ್ಲಿಕೇಶನ್ಗಳ ಮೇಲೆ ನಿಗಾ ಇಡಲಾಗಿದ್ದು, ದೇಶದ ಭದ್ರತೆ, ಮಾಹಿತಿ ಸೋರಿಕೆ, ಗೌಪ್ಯತೆ ಹಾಗೂ ಸುರಕ್ಷತೆ ದೃಷ್ಟಿಯಿಂದ ಅವುಗಳ ಪರಿಶೀಲನೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಆ್ಯಪ್ ಬ್ಯಾನ್ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ ಪಬ್ಜಿ ಗೇಮ್ ಆ್ಯಪ್ ಮೇಲು ನಿಗಾ ಇರಿಸಲಾಗಿದ್ದು, ನಿಷೇಧ ಮಾಡುವ ಸಾಧ್ಯತೆ ದಟ್ಟವಾಗಿ ಕಂಡು ಬರುತ್ತಿದೆ ಎನ್ನಲಾಗಿದೆ.