ಹೊಸದಿಲ್ಲಿ: ಕೋವಿಡ್-19 ನಿಂದಾಗಿ ಅಥವಾ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಪ್ರಾಣ ಕಳೆದುಕೊಳ್ಳುವ ಆರೋಗ್ಯ ಸೇವಾ ಸಿಬ್ಬಂದಿಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಪ್ಯಾಕೇಜ್ ವಿಮಾ ಯೋಜನೆಯಡಿ ವಿಮಾ ಸುರಕ್ಷೆ ನೀಡಲಾಗುವುದು ಎಂದು ಕೇಂದ್ರದ ಆರೋಗ್ಯ ಇಲಾಖೆ ಮಂಗಳವಾರ ತಿಳಿಸಿದೆ. ಯೋಜನೆಯ ಜಾರಿಯಿಂದಾಗಿ ದೇಶದ 22.12 ಲಕ್ಷ ಸಾರ್ವಜನಿಕ ಆರೋಗ್ಯ ಕಾರ್ಯಕರ್ತರು ಹಾಗೂ ಸಮುದಾಯ ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂ.ಗಳವರೆಗೆ ವಿಮಾ ಸುರಕ್ಷೆ ದೊರಕಲಿದೆ.
ಖಾಸಗಿ ಆಸ್ಪತ್ರೆಗಳ ಸಿಬ್ಬಂದಿ, ನಿವೃತ್ತ ಸಿಬ್ಬಂದಿ, ಸ್ವಯಂ ಸೇವಾ ಕಾರ್ಯಕರ್ತರು, ಗುತ್ತಿಗೆ ಕೆಲಸಗಾರರು, ದಿನಗೂಲಿ ನೌಕರರು ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮತ್ತು ಸ್ವಾಯತ್ತ ಆರೋಗ್ಯ ಸೇವಾ ಸಂಸ್ಥೆಗಳು ಹೊರಗುತ್ತಿಗೆ ಪಡೆದುಕೊಂಡ ಕಾರ್ಮಿಕರಿಗೂ ವಿಮಾ ಸೌಲಭ್ಯ ಸಿಗಲಿದೆ. ಕೋವಿಡ್ನಿಂದ ಮೃತರಾಗುವ ಮತ್ತು ಕೋವಿಡ್ ಸಂಬಂಧಿತ ಕರ್ತವ್ಯದಲ್ಲಿ ನಿರತರಾಗಿರುವಾಗ ಮೃತರಾಗುವ ಎರಡೂ ವರ್ಗದವರಿಗೆ ವಿಮಾ ಸುರಕ್ಷೆಯ ಲಾಭ ದೊರಕಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಮಾ.30 ರಿಂದ 90 ದಿನಗಳವರೆಗೆ ವಿಮಾ ಪಾಲಿಸಿ ಜಾರಿಯಲ್ಲಿರುತ್ತದೆ ಹಾಗೂ ವಯಸ್ಸಿನ ಯಾವುದೇ ನಿರ್ಬಂಧಗಳಿಲ್ಲ. ಯೋಜನೆಗೆ ವೈಯಕ್ತಿಕವಾಗಿ ನೋಂದಾಯಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ.
ವಿಮಾ ಪಾಲಿಸಿಯ ಸಂಪೂರ್ಣ ಪ್ರೀಮಿಯಂ ಮೊತ್ತವನ್ನು ಕೇಂದ್ರದ ಆರೋಗ್ಯ ಇಲಾಖೆ ಭರಿಸಲಿದೆ. ಆರೋಗ್ಯ ಇಲಾಖೆಯಡಿ ಬರುವ ಎನ್ಡಿಆರ್ಎಫ್ ಬಜೆಟ್ ಮೂಲಕ ಈ ವಿಮಾ ಯೋಜನೆಗೆ ಹಣಕಾಸು ಹೊಂದಿಸಲಾಗುತ್ತದೆ.
ಕೋವಿಡ್-19 ನಿಂದ ಜೀವಹಾನಿಯಾದಲ್ಲಿ ನಿರ್ದಿಷ್ಟ ಕ್ಲೇಮ್ ಫಾರ್ಮನ್ನು ಮೃತರ ನಾಮಿನಿ ಅಥವಾ ಕ್ಲೇಮುದಾರರು ತುಂಬಿ ಮೃತರ ಹಾಗೂ ಕ್ಲೇಮ್ ಮಾಡುವವರ ಗುರುತಿನ ಚೀಟಿ, ಮೃತ ವ್ಯಕ್ತಿ ಹಾಗೂ ಕ್ಲೇಮುದಾರರ ನಡುವಿನ ಸಂಬಂಧ ಸಾಬೀತುಪಡಿಸುವ ದಾಖಲೆ, ಕೋವಿಡ್ನಿಂದ ಮೃತಪಟ್ಟಿದ್ದನ್ನು ಖಾತರಿ ಪಡಿಸುವ ಲ್ಯಾಬ್ ವರದಿ, ಆಸ್ಪತ್ರೆಯಿಂದ ಪಡೆದ ಮರಣ ಪ್ರಮಾಣ ಪತ್ರ (ಆಸ್ಪತ್ರೆಯಲ್ಲಿ ಮೃತರಾಗಿದ್ದರೆ) ಹಾಗೂ ಮರಣ ಪ್ರಮಾಣ ಪತ್ರಗಳನ್ನು ಸಲ್ಲಿಸಿ ವಿಮಾ ಮೊತ್ತವನ್ನು ಪಡೆದುಕೊಳ್ಳಬಹುದು ಎಂದು ಆರೋಗ್ಯ ಇಲಾಖೆ ಹೇಳಿದೆ.