ಪುಣೆ: ಗೋವಾದಲ್ಲಿ ಕೋವಿಡ್ -19 ಪರೀಕ್ಷಾ ಸೌಲಭ್ಯ ಕೇಂದ್ರ ಸ್ಥಾಪಿಸಲು ಗೋವಾ ರಾಜ್ಯ ಆರೋಗ್ಯ ಇಲಾಖೆಯ ವೈದ್ಯರ ತಂಡ ಮೂರು ದಿನಗಳ ತರಬೇತಿಗಾಗಿ ಪುಣೆಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ನಡುವೆಯೂ ಈ ತಂಡವು ಗೋವಾದ ಐಎನ್‌ಎಸ್ ಹನ್ಸಾದಿಂದ ಭಾರತೀಯ ನೌಕಾಪಡೆಯ ಡಾರ್ನಿಯರ್ ವಿಮಾನದ ಮೂಲಕ ಬಂದಿದೆ.
ಗೋವಾ ವೈದ್ಯಕೀಯ ಕಾಲೇಜಿನ ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥ ಸವಿಯೊ ರೊಡ್ರಿಗಸ್ ನೇತೃತ್ವದ ತಂಡಕ್ಕೆ ಗೋವಾದಲ್ಲಿ ಪರೀಕ್ಷಾ ಸೌಲಭ್ಯ ಕೇಂದ್ರ ಸ್ಥಾಪಿಸಲು ಮಹಾರಾಷ್ಟ್ರ ಆರೋಗ್ಯ ಅಧಿಕಾರಿಗಳು ತರಬೇತಿ ನೀಡಲಿದ್ದಾರೆ.
ಕೋವಿಡ್ -19 ಶಂಕಿತರ ಮಾದರಿಗಳನ್ನು ಪರೀಕ್ಷೆಗೆ ಸಾಗಿಸಲು ವೈದ್ಯಕೀಯ ತಂಡಕ್ಕೆ ನೆರವಾಗುವಂತೆ ವಾಯು ಸಾರಿಗೆ ಸೇವೆ ಒದಗಿಸುವಂತೆ ಭಾರತೀಯ ನೌಕಾಪಡೆಗೆ ಮನವಿ ಸಲ್ಲಿಸಲಾಯಿತು. ತರಬೇತಿ ಮುಗಿದ ನಂತರ ತಂಡವು ಶುಕ್ರವಾರ (ಮಾರ್ಚ್ 27) ಗೋವಾಕ್ಕೆ ಮರಳುವ ಸಾಧ್ಯತೆ ಇದೆ ಎಂದು ರಕ್ಷಣಾ ವಕ್ತಾರ ತಿಳಿಸಿದ್ದಾರೆ.
ಮಹಾರಾಷ್ಟ್ರದ ಮುಂಬೈ ಮತ್ತು ಪುಣೆಯಲ್ಲಿ ಗರಿಷ್ಠ 116 ಕೋವಿಡ್-19 ಪ್ರಕರಣಗಳು ಕಂಡುಬಂದಿವೆ. ಇದುವರೆಗೂ ನಾಲ್ಕು ಜನರು ಈ ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ.
ಮುಂಬೈನ ಕಸ್ತೂರಿಬಾ ಆಸ್ಪತ್ರೆ ಮತ್ತು ಪುಣೆಯ ನಾಯ್ಡು ಆಸ್ಪತ್ರೆಯ ವೈದ್ಯರು ಕೊರೊನಾ ವೈರಸ್ನಂತಹ ಸಾಂಕ್ರಾಮಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ಪ್ರಮುಖ ತಜ್ಞರು ಎಂದು ಪರಿಗಣಿಸಲಾಗಿದೆ.