ಮಧ್ಯಪ್ರದೇಶ: ವಿದ್ಯಾಭ್ಯಾಸದಲ್ಲಿ ಚುರುಕಿಲ್ಲದ 10ನೇ ತರಗತಿ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆಗೆ ಹಾಜರಾಗುವ ಮೊದಲು ನಡೆಸುವ 45 ನಿಮಿಷಗಳ ಮಾದರಿ ಪರೀಕ್ಷಾ ಪತ್ರಿಕೆಯಲ್ಲಿ ಮುಜುಗರಕ್ಕೀಡಾಗುವಂತಹ ಪ್ರಶ್ನೆಯೊಂದು ಕಾಣಿಸಿಕೊಂಡಿದೆ.
ಹೌದು.., “ಸುಬುದ್ದಿ” (ನೀತಿವಂತ) ಮತ್ತು “ಕುಬುದ್ದಿ” (ಅನೈತಿಕ ಮನುಷ್ಯ) ಗುಣಗಳು ಯಾವುವು ಎಂಬ ಪ್ರಶ್ನೆಗೆ ಉತ್ತರವಾಗಿ, “ಕುಬುದ್ದಿ ಒಬ್ಬ ದುಷ್ಟ ಮನುಷ್ಯ, ಕುಡಿದು ಹಾಗೂ ಜೂಜು ಆಡಿ (drinking and gambling) ಜೀವನ ಸಾಗಿಸುತ್ತಿದ್ದನು ಎಂದು ಮುದ್ರಿಸುವ ಬದಲು, 'gambling' ಜಾಗದಲ್ಲಿ 'gandhiji' ಎಂದು ಮುದ್ರಣವಾಗಿದೆ.
ಇತ್ತೀಚೆಗೆ ಸಂಸತ್ತಿನಲ್ಲಿ ಗಾಂಧೀ ಹಂತಕ ನಾಥುರಾಮ್ ಗೋಡ್ಸೆ ಬಗ್ಗೆ ಬಿಜೆಪಿ ಸಂಸದೆ ಪ್ರಜ್ಞಾಸಿಂಗ್ ಠಾಕೂರ್ ಅವರ ಹೇಳಿಕೆ ವಿರುದ್ಧ ತನಿಖೆ ನಡೆಸಲು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಆದೇಶಿಸಿದ ಬೆನ್ನಲ್ಲೇ ಈಗ, 'ತಪ್ಪು ಮುದ್ರಣ'ದ ಕುರಿತೂ ತನಿಖೆ ನಡೆಸಲು ಆದೇಶ ನೀಡಿದೆ.
ಈ ಕುರಿತು ತನಿಖೆ ಆರಂಭಿಸಲಾಗಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ರಾಜ್ಯ ಶಿಕ್ಷಣ ಸಚಿವ ಪ್ರಭುರಾಮ್ ಚೌಧರಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.