ನವದೆಹಲಿ: ಬಿಹಾರ ವಿಧಾನಸಭೆ ಚುನಾವಣೆಯ ಮೇಲೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಉಚಿತ ಕೊರೊನಾ ಲಸಿಕೆ ನೀಡುವುದಾಗಿ ಘೋಷಿಸಿದೆ. ಇದಾದ ಬಳಿಕ ಬಿಜೆಪಿ ಆಮಿಷವನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿದ್ದು, ಕೊರೊನಾವನ್ನು ಬಿಜೆಪಿ ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದವು.
ಈ ಕುರಿತು ಸ್ಪಷ್ಟನೆ ನೀಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ನಾವು ಪ್ರಕಟಿಸಿರುವ ಪ್ರಣಾಳಿಕೆ ಕ್ರಮಬದ್ಧವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗ ಏನು ಮಾಡಬೇಕೆಂದು ಬಯಸುತ್ತದೆಯೋ ಅದನ್ನೇ ಘೋಷಿಸಿದೆ ಎಂದಿದ್ದಾರೆ.
ಬಿಹಾರ ಚುನಾವಣೆಗೆ ಸೀತಾರಾಮನ್ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಣಾಳಿಕೆಯನ್ನು ಗುರುವಾರ ಬಿಡುಗಡೆ ಮಾಡಿದ್ದರು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದ ಜನರಿಗೆ ಉಚಿತ ಕೋವಿಡ್ ಲಸಿಕೆ ನೀಡುವುದು ಭರವಸೆಗಳ ಪ್ರಮುಖ ಅಂಶವಾಗಿತ್ತು.
ಇದೇ ಅಕ್ಟೋಬರ್ 28ರಿಂದ ಬಿಹಾರದಲ್ಲಿ ಮೂರು ಹಂತದ ಚುನಾವಣೆಗೆ ಮತದಾನ ಆರಂಭವಾಗಲಿದೆ.