ನವದೆಹಲಿ: ಹೊಸ ವರ್ಷದ ವೇಳೆ ತನ್ನ ಮೊದಲ ಅಧಿಕೃತ ದೂರವಾಣಿ ಸಂಭಾಷಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರನ್ ಅವರ ಜೊತೆ ಮಾತುಕತೆ ನಡೆಸಿ ಮಧ್ಯಪ್ರಾಚ್ಯ ಮತ್ತು ಕಾಶ್ಮೀರದ ಪ್ರಸಕ್ತ ಉದ್ವಿಗ್ನ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದರು.
ಜೆ ಸಿ ಪಿ ಪಿ ಒ ಎ (ಜಂಟಿ ಸಮಗ್ರ ಕ್ರಿಯಾ ಯೋಜನೆ) ಅಥವಾ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿರುವ ಪಿ 5 ದೇಶಗಳಲ್ಲಿ ಫ್ರಾನ್ಸ್ ಕೂಡ ಒಂದು. ಇರಾನ್ ಸಹಿ ಹಾಕಿದ್ದ ಈ ಒಪ್ಪಂದದಿಂದ 2018ರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಿಂದೆ ಸರಿದಿದ್ದರು. ಅಮೆರಿಕ ಮತ್ತು ತನ್ನ ನಡುವಿನ ಉದ್ವಿಗ್ನತೆಯಿಂದಾಗಿ ಕಳೆದ ವಾರ ನೂರಾರು ಜನ ಪ್ರಯಾಣಿಸುತ್ತಿದ್ದ ಉಕ್ರೇನ್ ನಾಗರಿಕ ವಿಮಾನವನ್ನು ಆಕಸ್ಮಿಕವಾಗಿ ಹೊಡೆದುರುಳಿಸಿದ್ದಾಗಿ ಇರಾನ್ ಒಪ್ಪಿಕೊಂಡಿತ್ತು. ಉದ್ವಿಗ್ನತೆ ಶಮನಗೊಳಿಸುವ ಉದ್ದೇಶದಿಂದ ಮಾತುಕತೆ ಮುಂದುವರಿಸಬೇಕು ಎಂದು ತನ್ನ ಐರೋಪ್ಯ ಸಹವರ್ತಿಗಳ ಜೊತೆಗೂಡಿ ಫ್ರಾನ್ಸ್ ಸಲಹೆ ನೀಡುತ್ತಿದೆ.
ಸುಮಾರು ಎಂಬತ್ತು ಲಕ್ಷದಷ್ಟು ಭಾರತೀಯ ವಲಸಿಗರು ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿದ್ದು ಸಂಘರ್ಷ ತಲೆದೋರಿದರೆ ಅವರು ಅಪಾಯಕ್ಕೆ ಸಿಲುಕುವ ಸಾಧ್ಯತೆಗಳಿವೆ. ಇಂಧನ ಸುರಕ್ಷತೆ ಮತ್ತು ಇರಾನಿನಲ್ಲಿ ತಾನು ಅಭಿವೃದ್ಧಿಪಡಿಸಿರುವ ಚಹಬರ್ ಬಂದರಿನ ಭದ್ರತೆಯ ಜೊತೆಗೆ ಇದು ಕೂಡ ಭಾರತವನ್ನು ಕಾಡುತ್ತಿದೆ. ‘ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ಉದ್ವಿಗ್ನತೆ ಶಮನಗೊಳಿಸುವ ಅಗತ್ಯತೆ ಇದೆ ಎಂದು ಫ್ರೆಂಚ್ ಗಣರಾಜ್ಯದ ಅಧ್ಯಕ್ಷ ಮತ್ತು ಭಾರತದ ಪ್ರಧಾನ ಮಂತ್ರಿ ತಮ್ಮ ಭೇಟಿ ವೇಳೆ ಅಭಿಪ್ರಾಯಪಟ್ಟಿದ್ದಾರೆ. ತ್ವೇಷಮಯ ವಾತಾವರಣ ತಿಳಿಗೊಳಿಸುವ ನಿಟ್ಟಿನಲ್ಲಿ ಎರಡೂ ಕಡೆಯವರು ಸಂಯಮ ಮತ್ತು ಜವಾಬ್ದಾರಿಯಿಂದ ವರ್ತಿಸುವಂತೆ ಸೂಚಿಸಲು ತಾವು ಕೆಲಸ ಮಾಡಲು ನಿರ್ಧರಿಸಿದ್ದಾರೆ’ ಎಂದು ಮ್ಯಾಕ್ರನ್ ಮತ್ತು ಮೋದಿ ನಡುವಿನ ಸಂಭಾಷಣೆಯ ಬಗ್ಗೆ ಜನವರಿ 10 ರಂದು ಫ್ರೆಂಚ್ ಅಧ್ಯಕ್ಷರ ಕಚೇರಿ ಎಲಿಸಿ ಅರಮನೆ ಹೊರಡಿಸಿರುವ ಅಧಿಕೃತ ಪ್ರಕಟಣೆ ತಿಳಿಸಿದೆ.
ಕಾಶ್ಮೀರದ ಪರಿಸ್ಥಿತಿ ಅರಿಯಲು ಅಮೆರಿಕ, ನಾರ್ವೆ ಹಾಗೂ ದಕ್ಷಿಣ ಕೊರಿಯಾದ ವಿದೇಶಿ ರಾಯಭಾರಿಗಳು ಜಮ್ಮು ಮತ್ತು ಕಾಶ್ಮೀರಕ್ಕೆ ನಿರ್ದೇಶಿತ ಪ್ರವಾಸ ಕೈಗೊಂಡ ಕೇವಲ ಒಂದು ದಿನದ ಬಳಿಕ ಈ ಸಂಭಾಷಣೆ ನಡೆದಿದ್ದು ಈ ವೇಳೆ ಕಣಿವೆಯ ಸ್ಥಿತಿಗತಿ ಕುರಿತು ಭಾರತ ಮತ್ತು ಫ್ರಾನ್ಸ್ ಚರ್ಚೆ ನಡೆಸಿವೆ. ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳಿಗಾಗಿ ಕೂಡ ಇದೇ ಬಗೆಯ ಪ್ರವಾಸ ಆಯೋಜಿಸಲು ನಿರ್ಧರಿಸಿದ್ದು ಆ ದೇಶಗಳ ರಾಯಭಾರಿಗಳೊಂದಿಗೆ ಭಾರತದ ವಿದೇಶಾಂಗ ಸಚಿವಾಲಯ ಸಂಪರ್ಕದಲ್ಲಿ ಇದೆ. ಫ್ರಾನ್ಸ್ ಕೂಡ ಪ್ರವಾಸದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ‘ವಿಶ್ವಾಸ ಮತ್ತು ಪ್ರಾಮಾಣಿಕತೆಯಿಂದ ಎರಡೂ ದೇಶಗಳ ಸಂಬಂಧ ರೂಪುಗೊಂಡಿದ್ದು ಫ್ರಾನ್ಸ್ ಅಧ್ಯಕ್ಷ ಮತ್ತು ಭಾರತ ಪ್ರಧಾನಿ ಈ ಪ್ರದೇಶದ ಪರಿಸ್ಥಿತಿ ಕುರಿತು ಚರ್ಚಿಸಿದ್ದಾರೆ. ಫ್ರಾನ್ಸ್ ಈ ವಿಚಾರವಾಗಿ ಹೆಚ್ಚು ನಿಗಾ ವಹಿಸಲಿದೆ’ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಕಾಶ್ಮೀರದ ನಾಗರಿಕರು ಮತ್ತು ಬಂಧನಕ್ಕೆ ಒಳಗಾಗಿರುವ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸೇರಿದಂತೆ ವಿವಿಧ ರಾಜಕೀಯ ನಾಯಕರನ್ನು ಮುಕ್ತವಾಗಿ ಭೇಟಿ ಮಾಡಲು ನಿರಾಕರಿಸಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಐರೋಪ್ಯ ಒಕ್ಕೂಟದ ರಾಯಭಾರಿಗಳು ಭೇಟಿ ನಿಯೋಗದ ಭಾಗವಾಗಲು ನಿರಾಕರಿಸಿದ್ದಾರೆ ಎಂದು ಕಳೆದ ವಾರ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದವು. ಇದನ್ನು ನಿರಾಕರಿಸಿರುವ ವಿದೇಶಾಂಗ ಸಚಿವಾಲಯ ವ್ಯವಸ್ಥಾಪನಾ ಸಮಸ್ಯೆ ಉಂಟಾಗಿದೆ ಎಂದಿದೆ. ಶ್ರೀನಗರಕ್ಕೆ ಒಂದು ಗುಂಪಾಗಿ ಐರೋಪ್ಯ ಒಕ್ಕೂಟದ ಸದಸ್ಯರು ಪ್ರಯಾಣಿಸಲು ನಿರ್ಧರಿಸಿದ್ದರಿಂದ ಅದಕ್ಕೆ ಪ್ರತ್ಯೇಕ ದಿನ ನಿಗದಿಪಡಿಸುವ ಅವಶ್ಯಕತೆ ಇದೆ ಎಂದು ಅದು ಹೇಳಿದೆ. ಈ ಹಿಂದೆ ಕಾಶ್ಮೀರಕ್ಕೆ ಖಾಸಗಿ ಭೇಟಿ ನೀಡಿದ್ದ ಐರೋಪ್ಯ ಸಂಸತ್ ಸದಸ್ಯರಲ್ಲಿ ಬಹುತೇಕರು ಬಲಪಂಥೀಯರಾಗಿದ್ದರು ಎಂಬ ಕಾರಣಕ್ಕೆ ಭುಗಿಲೆದ್ದ ರಾಜಕೀಯ ವಿವಾದ ಮೋದಿ ಸರ್ಕಾರವನ್ನು ಟೀಕಿಸಿತ್ತು.
ನಿಯೋಗದ ಭಾಗವಾಗಿ ಕಳೆದ ವಾರ ಅಮೆರಿಕ ರಾಯಭಾರಿ ಕೆನ್ನೆತ್ ಜಸ್ಟರ್ ಅವರು ಈ ಪ್ರದೇಶಕ್ಕೆ ಪ್ರಾಸಂಗಿಕ ಭೇಟಿ ನೀಡಿ ಸಹಜತೆ ಮತ್ತು ಭದ್ರತಾ ಪರಿಸ್ಥಿತಿ ಕುರಿತು ವಿವರಣೆ ನೀಡಿದ್ದಾರೆ. ಇದರ ಹೊರತಾಗಿಯೂ ಅಮೆರಿಕ ಆಡಳಿತ ಕಾಶ್ಮೀರದಲ್ಲಿ ನಡೆದ ಬಂಧನ ಮತ್ತು ಹೇರಲಾದ ಸಂವಹನ ನಿರ್ಬಂಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಅಮೆರಿಕದ, ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಇಲಾಖೆಯ ಪ್ರಧಾನ ಉಪ ಸಹಾಯಕ ಕಾರ್ಯದರ್ಶಿ ಅಲೈಸ್ ವೆಲ್ಸ್ ಅವರ ಸಹಿ ಇರುವ ಟ್ವೀಟ್ ನಲ್ಲಿ ‘@USAmbIndia ಮತ್ತು ವಿದೇಶಿ ರಾಜತಾಂತ್ರಿಕರು ಜಮ್ಮು ಮತ್ತು ಕಾಶ್ಮೀರಕ್ಕೆ ಕೈಗೊಂಡ ಇತ್ತೀಚಿನ ಪ್ರವಾಸ ಆಧರಿಸಿ, ಅಲ್ಲಿನ ರಾಜಕೀಯ ನಾಯಕರು ಮತ್ತು ನಿವಾಸಿಗಳನ್ನು ಬಂಧಿಸಿರುವ ಮತ್ತು ಅಂತರ್ಜಾಲ ನಿರ್ಬಂಧ ಹೇರಿರುವ ಕುರಿತಂತೆ ಕಳವಳ ವ್ಯಕ್ತಪಡಿಸುತ್ತೇವೆ.
ಕಾಶ್ಮೀರ ಸಹಜ ಸ್ಥಿತಿಗೆ ಮರಳುವುದನ್ನು ನಾವು ಎದುರು ನೋಡುತ್ತಿದ್ದೇವೆ. ಎಜಿಡಬ್ಲ್ಯೂ’ ಎಂಬ ಒಕ್ಕಣೆ ಇದೆ. ಇಂದಿನಿಂದ ಶ್ರೀಲಂಕಾ, ಭಾರತ ಹಾಗೂ ಪಾಕಿಸ್ತಾನಕ್ಕೆ ವೆಲ್ಸ್ ಅವರು ಭೇಟಿ ನೀಡುತ್ತಿದ್ದಾರೆ. ಬಳಿಕ ಜನವರಿ 15ರಿಂದ 18ರವರೆಗೆ ಭಾರತದ ನೇತೃತ್ವದಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಬಹುಪಕ್ಷೀಯ ವಿದೇಶಾಂಗ ವ್ಯವಹಾರಗಳ ಸಮಾವೇಶ ‘ರೈಸಿನಾ ಡೈಲಾಗ್’ನಲ್ಲಿ ಆಕೆ ಪಾಲ್ಗೊಳ್ಳಲಿದ್ದಾರೆ. 2019ರ ಅಮೆರಿಕ- ಭಾರತ 2 + 2 ಸಚಿವರ ಮಟ್ಟದ ಮಾತುಕತೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಭಾರತ ಮತ್ತು ಅಮೆರಿಕದ ಜಾಗತಿಕ ಕಾರ್ಯತಂತ್ರವನ್ನು ಮುನ್ನಡೆಸುವ ಉದ್ದೇಶದಿಂದ ಆಕೆ ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಕೂಡ ಭೇಟಿ ಆಗಲಿದ್ದಾರೆ. ಈ ಭೇಟಿ ವೇಳೆ ವ್ಯಾಪಾರಿ ಸಮುದಾಯ ಮತ್ತು ನಾಗರಿಕ ಸಮಾಜಕ್ಕೆ ಆದ್ಯತೆ ಕುರಿತ ಪರಸ್ಪರ ಹಿತಾಸಕ್ತಿಗಳನ್ನು ಚರ್ಚಿಸಲು ಉದ್ದೇಶಿಸಲಾಗಿದೆ’ ಎಂದು ಅಧಿಕೃತ ಮಾಹಿತಿ ತಿಳಿಸಿದೆ. ದೆಹಲಿ ಭೇಟಿ ಬಳಿಕ ವೆಲ್ಸ್ ಅವರು ಇಸ್ಲಾಮಾಬಾದಿಗೆ ಪ್ರಯಾಣ ಬೆಳಸಲಿದ್ದಾರೆ.
ಈ ಮಧ್ಯೆ ಶುಕ್ರವಾರದ ಸಂಭಾಷಣೆ ವೇಳೆ ಹವಾಮಾನ ಬದಲಾವಣೆ ಮತ್ತು ಭಾರತ- ಪೆಸಿಫಿಕ್ ಕಾರ್ಯತಂತ್ರದ ಕುರಿತಂತೆಯೂ ಮ್ಯಾಕ್ರನ್ ಮತ್ತು ಮೋದಿ ಚರ್ಚೆ ನಡೆಸಿದ್ದಾರೆ. "ಸೇನೆ ಮತ್ತು ನಾಗರಿಕ ಪರಮಾಣು ಕ್ಷೇತ್ರಗಳಲ್ಲಿ ಸಹಭಾಗಿತ್ವ ಮುಂದುವರಿಸುವುದು ಹಾಗೂ ಬಲಪಡಿಸುವುದು ಹಾಗೂ ಭಾರತ- ಫೆಸಿಫಿಕ್ ಪ್ರದೇಶದಲ್ಲಿ ಕಾರ್ಯಾಚರಣೆ ಸಹಕಾರ ಹೆಚ್ಚಿಸುವ ಕುರಿತಂತೆ ಇಬ್ಬರು ನಾಯಕರು ತಮ್ಮ ಆಸಕ್ತಿ ವ್ಯಕ್ತಪಡಿಸಿದರು’ ಎಂದು ಫ್ರೆಂಚ್ ಪ್ರಕಟಣೆ ತಿಳಿಸಿದೆ.
ಸ್ಮಿತಾ ಶರ್ಮಾ