ಕೊಚ್ಚಿ (ಕೇರಳ): ಭಾರತದಲ್ಲಿ ಸಿಲುಕಿದ್ದ ತನ್ನ 112 ಪ್ರಜೆಗಳನ್ನು ಫ್ರಾನ್ಸ್ ಶನಿವಾರ ಮರಳಿ ತನ್ನ ದೇಶಕ್ಕೆ ಕರೆದೊಯ್ದಿದೆ. ಕೇರಳ ಹಾಗೂ ತಮಿಳುನಾಡುಗಳಲ್ಲಿದ್ದ 112 ಪ್ರಜೆಗಳನ್ನು ಏರ್ ಇಂಡಿಯಾದ ವಿಶೇಷ ವಿಮಾನ ಮೂಲಕ ಫ್ರಾನ್ಸ್ಗೆ ಕರೆದೊಯ್ಯಲಾಯಿತು.
ಕೊರೊನಾ ವೈರಸ್ ಲಾಕ್ಡೌನ್ ಕಾರಣದಿಂದ ಭಾರತದಲ್ಲೇ ಉಳಿಯುವಂತಾಗಿದ್ದ ತನ್ನ ನಾಗರಿಕರನ್ನು ದೇಶಕ್ಕೆ ಕರೆದೊಯ್ಯಲು ಅನುವು ಮಾಡಿಕೊಡಬೇಕೆಂದು ಫ್ರಾನ್ಸ್ ರಾಯಭಾರ ಕಚೇರಿ ಕೇರಳ ಸರ್ಕಾರಕ್ಕೆ ಮನವಿ ಮಾಡಿತ್ತು. ಫ್ರಾನ್ಸ್ನ ಈ ನಾಗರಿಕರು ಪ್ರವಾಸ ಮಾಡಲು ಹಾಗೂ ಕೇರಳದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯಲು ಭಾರತಕ್ಕೆ ಆಗಮಿಸಿದ್ದರು.
ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ಯಾರಿಸ್ಗೆ ತೆರಳುವ ಮುನ್ನ ಈ ಎಲ್ಲ ಪ್ರವಾಸಿಗರ ಆರೋಗ್ಯ ತಪಾಸಣೆ ನಡೆಸಲಾಯಿತು. ತನ್ನ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳಲು ಫ್ರೆಂಚ್ ಸರಕಾರ ಏರ್ ಇಂಡಿಯಾ ವಿಮಾನವನ್ನು ಬಾಡಿಗೆಗೆ ಪಡೆದುಕೊಂಡಿತ್ತು.
ಶುಕ್ರವಾರದಂದು ಗಲ್ಫ್ ರಾಷ್ಟ್ರ ಓಮನ್ ಕೊಚ್ಚಿ ವಿಮಾನ ನಿಲ್ದಾಣದಿಂದ ತನ್ನ 46 ಪ್ರಜೆಗಳನ್ನು ಓಮನ್ ಏರ್ ಫ್ಲೈಟ್ ಮೂಲಕ ಕರೆದೊಯ್ದಿದೆ.