ಹೈದರಾಬಾದ್: ಲಾಕ್ಡೌನ್ ನಡುವೆಯೇ ಎಣ್ಣೆ ಪಾರ್ಟಿ ಆಯೋಜನೆ ಮಾಡಿದ್ದ ನಾಲ್ಕು ಸರ್ಕಾರಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಖಮ್ಮಂ ಜಿಲ್ಲೆಯ ಮಧಿರಾದಲ್ಲಿನ ಅತಿಥಿಗೃಹವೊಂದರಲ್ಲಿ ಈ ಅಧಿಕಾರಿಗಳು ಸೋಮವಾರ ರಾತ್ರಿ ಪಾರ್ಟಿ ಆಯೋಜಿಸಿದ್ದರು. ಈ ಬಗ್ಗೆ ಸುಳಿವು ಪಡೆದ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ವೇಳೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಶ್ರೀನಿವಾಸ್ ಕೋಣೆಯಲ್ಲಿ ಅಡಗಿಕೊಂಡಿದ್ದಾರೆ. ಇನ್ನುಳಿದ ಮೂವರು ಅಲ್ಲಿಂದ ಪರಾರಿಯಾಗಿದ್ದಾರೆ. ಇನ್ನು ಸ್ಥಳದಲ್ಲಿದ್ದ ಮದ್ಯ ಹಾಗೂ ಆಹಾರ ಪದಾರ್ಥಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆ ಹಿನ್ನೆಲೆ ಮಂಗಳವಾರ ನಾಲ್ವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ತಹಶೀಲ್ದಾರ್ ಸೈದುಲು, ಉಪ ಜೈಲರ್ ಪ್ರಭಾಕರ್ ರೆಡ್ಡಿ ಮತ್ತು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ವಿಸ್ತರಣಾಧಿಕಾರಿ ರಾಜ ರಾವ್, ವೈದ್ಯ ಶ್ರೀನಿವಾಸ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 188, 269 ಮತ್ತು 1897 ರ ಸೆಕ್ಷನ್ 3ರ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಇದಕ್ಕಿಂತ ಹೆಚ್ಚಿನ ಅಧಿಕಾರಿಗಳು ಭಾಗಿಯಾಗಿದ್ದರೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.