ನವದೆಹಲಿ: "ಸುದೀರ್ಘ ಪ್ರಯಾಣ ಕೈಗೊಳ್ಳಬೇಕಾದರೆ, ಒಂದೇ ಬಾರಿಗೆ ದೊಡ್ಡ ಹೆಜ್ಜೆ ಇಡುವ ಅಗತ್ಯವಿದೆ" ಎನ್ನುವುದು ಪುರಾತನ ಚೀನೀ ಮಾತು. ಈ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ ದೆಹಲಿ ಹಾಗೂ ಬೀಜಿಂಗ್ ನಡುವಿನ ವಿಶ್ವಾಸದ ಕೊರತೆಯನ್ನು ನೀಗಿಸಲು ಇನ್ನೂ ಸಾಧ್ಯವಾಗಿಲ್ಲ. ಅಕ್ಟೋಬರ್ನಲ್ಲಿ ಎರಡನೇ ಅನೌಪಚಾರಿಕ ಸಭೆಗೆ ಪ್ರಧಾನಿ ಮೋದಿ, ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ರನ್ನು ಬರಮಾಡಿಕೊಳ್ಳಲಿದ್ದಾರೆ. ಈ ಇಬ್ಬರು ನಾಯಕರು ಈ ವರ್ಷ ಈಗಾಗಲೇ ಬಿಶೆಕ್ನ ಎಸ್ಸಿಒ (ಶಾಂಘೈ ಕೋ-ಆಪರೇಶನ್ ಆರ್ಗನೈಸೇಷನ್) ಸಮಿಟ್ ಹಾಗೂ ಒಸಾಕಾದ ಜಿ20 ಶೃಂಗ ಸಭೆಯಲ್ಲಿ ಮುಖಾಮುಖಿಯಾಗಿದ್ದಾರೆ. ಇದೀಗ ಅಕ್ಟೋಬರ್ನಲ್ಲಿ ಭೇಟಿಯಾಗಲು ಉಭಯ ದೇಶಗಳ ಮುಖಂಡರು ತಯಾರಿ ನಡೆಸುತ್ತಿದ್ದಾರೆ.
ಕಾಶ್ಮೀರವೇ ಪ್ರಮುಖ ಕೀಲಿಕೈ:
ಮೋದಿ ಸರ್ಕಾರ ಆಗಸ್ಟ್ 5 ರಂದು ತೆಗೆದುಕೊಂಡ ಐತಿಹಾಸಿಕ ನಿರ್ಧಾರ, 370ನೇ ವಿಧಿ ರದ್ದತಿಯೇ ಈ ಭೇಟಿಗೆ ಪ್ರಮುಖ ಕಾರಣವಾಗಿದೆ. ಜೊತೆಗೆ ಇವರ ಈ ಭೇಟಿಯಲ್ಲಿ ಚೀನಾದ ಟೆಲಿಕಾಂ ದೈತ್ಯ ಹುವಾಯಿಯ 5 ಜಿ ಪ್ರಯೋಗಗಳಿಗೆ ಭದ್ರತಾ ಅನುಮತಿಗೆ ಸರ್ಕಾರ ಹಸಿರು ನೀಶಾನೆ ನೀಡದಿರಲು ಭಾರತಕ್ಕೆ ಅಮೆರಿಕದ ಒತ್ತಡ, ಬೀಜಿಂಗ್ನ ವ್ಯಾಪಾರ ಸಂಬಂಧಿ ಅಸಮಾಧಾನ, ಬಿಸಿಐಎಂ (ಬಾಂಗ್ಲಾದೇಶ-ಚೀನಾ-ಭಾರತ-ಮ್ಯಾನ್ಮಾರ್) ಆರ್ಥಿಕ ಕಾರಿಡಾರ್ ಬಗ್ಗೆ ಚರ್ಚೆ ನಡೆಯಲಿದೆ.
370ನೇ ವಿಧಿ ರದ್ದು ಮಾಡಿರುವ ಭಾರತದ ಕ್ರಮ ಸ್ವೀಕಾರಾರ್ಹವಲ್ಲ. ಇದರಿಂದ ಭಾರತ ತನ್ನ ದೇಶೀಯ ಕಾನೂನನ್ನು ಏಕಪಕ್ಷೀಯವಾಗಿಸಿ ಚೀನಾದ ಪ್ರಾದೇಶಿಕ ಸಾರ್ವಭೌಮತ್ವವನ್ನು ದುರ್ಬಲಗೊಳಿಸಿದೆ ಎಂದು ಚೀನಾದ ವಿದೇಶಾಂಗ ಕಚೇರಿಯ ವಕ್ತಾರ ಟೀಕಿಸಿದ್ದರು. ಆದರೆ ಲಡಾಖ್ ಮೇಲಿನ ಹೆಚ್ಚಿನ ಆಡಳಿತಾತ್ಮಕ ನಿಯಂತ್ರಣವು ಭಾರತ ಹಾಗೂ ಚೀನಾದ ಎಲ್ಒಸಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಹೇಳಿಕೆ ನೀಡಿದ್ದರು. ಅಲ್ಲದೇ 'ಭಾರತ ಮಾತು ಚೀನಾ ಜೊತೆಯಾಗಬೇಕು ಎಂಬುದು ಮೊದಲಿನಿಂದಲೂ ಏಷ್ಯಾದಲ್ಲಿ ಕೇಳಿ ಬರುವ ಮಾತು. ಗಡಿ ವಿವಾದ ಸೇರಿ ಹಲವಾರು ಸಮಸ್ಯೆಗಳು ಭಾರತಕ್ಕೆ ಚೀನಾದೊಂದಿಗಿದೆ, ಅವುಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇವೆ' ಎಂದು ಜೈಶಂಕರ್ ಹೇಳಿದ್ದಾರೆ.
ಜೈಶಂಕರ್ ಭೇಟಿಯ ನಂತರ ಚೀನಾ, ಕಾಶ್ಮೀರದ ವಿಷಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚರ್ಚಿಸಲು ಮುಂದಾಗಿತ್ತಾದರೂ, ಇದ್ಯಾವುದಕ್ಕೂ ಮಂಡಳಿ ಉತ್ತೇಜನ ನೀಡಲಿಲ್ಲ. ಭಾರತ ಹಾಗೂ ಚೀನಾ ನಡುವಿನ ಗಡಿ ಸಮಸ್ಯೆ ಕುರಿತು ದೆಹಲಿಯಲ್ಲಿ ಎನ್ಎಸ್ಎ ಅಜಿತ್ ದೋವಲ್ ಅವರೊಂದಿಗೆ ಚರ್ಚಿಸಬೇಕಿದ್ದ ಚೀನಾದ ವಿದೇಶಾಂಗ ಮಂತ್ರಿ ವಾಂಗ್ ಯಿ, ಅದರ ಬದಲು ಪಾಕಿಸ್ತಾನಕ್ಕೆ ಪ್ರಯಾಣಿಸಿ ಇಸ್ಲಮಾಬಾದ್ನಲ್ಲಿ ರಾಜಕೀಯ ಹಾಗೂ ಸೇನಾ ನಾಯಕರನ್ನು ಭೇಟಿಯಾಗಿದ್ದರು. ಇದೀಗ ಪ್ರಧಾನಿ ಮೋದಿಯ ಕ್ಷೇತ್ರವಾದ ವಾರಣಾಸಿಯ ಬದಲು ತಮಿಳುನಾಡಿನ ಕರಾವಳಿ ಭಾಗದ ಪಟ್ಟಣವೊಂದರಲ್ಲಿ ಕ್ಸಿ ಜಿನ್ಪಿಂಗ್ ಅವರೊಂದಿಗೆ ಅನೌಪಚಾರಿಕ ಸಭೆ ನಡೆಸುವ ಸೂಚನೆ ಸಹ ಇದೆ.
ಎಲ್ಒಸಿ-ಎಲ್ಎಸಿ ಬಗ್ಗೆ ಚರ್ಚೆ:
ಎಲ್ಒಸಿ ಹಾಗೂ ಗಡಿಭಾಗದಲ್ಲಿ ಪಾಕಿಸ್ತಾನವು ನಿರಂತರವಾಗಿ ಕದನವಿರಾಮ ಉಲ್ಲಂಘಿಸುತ್ತಿರುವುದರಿಂದ ಎಲ್ಎಸಿ (ನೈಜ ಗಡಿ ನಿಯಂತ್ರಣ ರೇಖೆ) ಶಾಂತವಾಗುವಂತೆ ನೋಡಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕಿದೆ. ಲಡಾಖ್ ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಿ ಗೃಹ ಸಚಿವ ಅಮಿತ್ ಶಾ, ಅಕ್ಸಾಯ್ ಚಿನ್ ಹಾಗೂ ಪಿಒಕೆಯನ್ನು ಭಾರತದ ಅವಿಭಾಜ್ಯ ಅಂಗ ಎಂದು ಸದನದಲ್ಲಿ ಹೇಳಿರುವುದು ಚೀನಾಕ್ಕೆ ಅಸಮಾಧಾನ ಉಂಟುಮಾಡಿತ್ತು. ಕಳೆದ ವಾರ ಭಾರತ ಹಾಗೂ ಚೀನೀ ಸೈನಿಕರ ನಡುವೆ ಲಡಾಕ್ನ ಪಂಗೊಂಗ್ ತ್ಸೊ ಸರೋವರದ ದಂಡೆಯಲ್ಲಿ ನಡೆದ ಜಗಳವು ಉಭಯ ಸೈನ್ಯದ ಮಾತುಕತೆಯ ಮೂಲಕ ನಿಂತಿತ್ತು. ಆದರೆ ಕ್ಸಿ ಭೇಟಿಯಾಗುವವರೆಗೆ ಮತ್ತೆ ಈ ರೀತಿ ನಡೆಯಬಾರದು ಎಂಬ ಆದೇಶವೂ ಇತ್ತು.
2017ರ ಆಗಸ್ಟ್ ನಲ್ಲಿ ಅದೇ ಸರೋವರದ ದಂಡೆಯಲ್ಲಿ ಎರಡು ಸೈನ್ಯಗಳ ನಡುವೆ ಕಲ್ಲು ತೂರಾಟ ನಡೆದಿತ್ತು, ಜೊತೆಗೆ ಭಾರತೀಯ ಸೇನೆ ಚೀನೀಯರ ಪ್ರಯತ್ನವನ್ನು ವಿಫಲಗೊಳಿಸಿತ್ತು. ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿ ಡೋಕ್ಲಾಮ್ ವಿಷಯದ ಕುರಿತಾದ ವುಹಾನ್ ಶೃಂಗಸಭೆಯಲ್ಲಿ ಉದ್ವಿಗ್ನತೆಗೆ ಕಾರಣವಾಯಿತು. 2014ರಲ್ಲಿ ಕ್ಸಿ ಜಿನ್ಪಿಂಗ್ ಅವರ ಭಾರತದ ಮೊದಲ ಭೇಟಿಯ ಸಂದರ್ಭದಲ್ಲಿ ಪಿಎಲ್ಎ, ಚುಮಾರ್ನಲ್ಲಿ ರಸ್ತೆ ನಿರ್ಮಿಸಲು ಪ್ರಯತ್ನಿಸುತ್ತಿತ್ತು. ಭಾರತೊಂದಿಗೆ 40,000 ಕಿ.ಮೀ ಗಡಿ ಹೊಂದಿರುವ ಚೀನಾ ದೇಶವು ಭಾರತದ ಮೇಲೆ ಯಾವ ರೀತಿ ಒತ್ತಡ ಹೇರುತ್ತಿದೆ ಎಂಬುದು ಈ ಹಿಂದಿನ ಚೀನಾದ ಆಕ್ರಮಣಗಳ ಮೂಲಕ ತಿಳಿಯುತ್ತದೆ.
ಯುಎಸ್ಎ ಮತ್ತು ಜಪಾನ್‌ನೊಂದಿಗೆ ಇಂಡೋ-ಪೆಸಿಫಿಕ್ ಕಾರ್ಯತಂತ್ರದಲ್ಲಿ ಚೀನಾದೊಂದಿಗೆ ಸಮತೋಲನ ಮಾಡಲು ಭಾರತ ಪ್ರಯತ್ನಿಸಿತು. ಇತ್ತೀಚೆಗೆ ವ್ಲಾಡಿವೋಸ್ಟಾಕ್‌ನಲ್ಲಿ ಮೋದಿ-ಪುಟಿನ್ ನಡುವೆ ಸಂಭಾಷಣೆಯೂ ನಡೆಯಿತು. "ರಷ್ಯಾದ ಯುರೇಷಿಯನ್ ಹಕ್ಕನ್ನು ಪುನರುಜ್ಜೀವನಗೊಳಿಸುವ ಅಗತ್ಯವಿದೆ. ಇಂಡೋ-ಪೆಸಿಫಿಕ್ ಸನ್ನಿವೇಶದಲ್ಲಿಯೂ ಸಹ, ಎಎಸ್ಇಎಎನ್ ಜೊತೆ ಸೇರಿ ರಷ್ಯಾ ಚತುರವಾಗಿ ಆಡುತ್ತಿದೆ" ಎಂದು ದೆಹಲಿಯ ಸೆಂಟರ್ ಫಾರ್ ಏರ್ ಪವರ್ ಸ್ಟಡೀಸ್‌ನ ಸಂಶೋಧನಾರ್ಥಿ ಕಾರ್ಲ್ ಜಾನ್ಸನ್ ಅವರು ದಿ ಡಿಪ್ಲೊಮ್ಯಾಟ್ ಎಂಬ ಲೇಖನದಲ್ಲಿ ಹೇಳಿದ್ದಾರೆ.
ಅತ್ತ ಮುಂದಿನ ಕೆಲವೇ ದಿನಗಳಲ್ಲಿ ಪ್ರಧಾನಿ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದು, ಇತ್ತ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನ್ಯೂಯಾರ್ಕ್‌ನಲ್ಲಿ ಕಾಶ್ಮೀರದ ವಿಷಯವನ್ನು ಎತ್ತಿದಾಗ, ಭಾರತ-ಪಾಕಿಸ್ತಾನದ ವಾಕ್ಚಾತುರ್ಯ ಮತ್ತಷ್ಟು ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೇ ಚೀನಾ, ಸಿಪಿಇಸಿ (ಚೀನಾ-ಪಾಕ್ ಎಕನಾಮಿಕ್ ಕಾರಿಡಾರ್) ನಲ್ಲಿ ತನ್ನ ಶತಕೋಟಿ ಡಾಲರ್ ಹೂಡಿಕೆಯೊಂದಿಗೆ, ಬಿಆರ್ಐ (ಬೆಲ್ಟ್ಸ್ ಮತ್ತು ರೋಡ್ಸ್ ಇನಿಶಿಯೇಟಿವ್) ಅನ್ನು ಕರೆಯಲಿದ್ದು, ರಾವಲ್ಪಿಂಡಿಯಲ್ಲಿ ಜನರಲ್‌ಗಳ ಪರವಾದ ತನ್ನ ನಿಲುವನ್ನು ಮುಂದುವರಿಸಲಿದೆ.
'ಕಾಶ್ಮೀರದಲ್ಲಿ ಅಣೆಕಟ್ಟು ನಿರ್ಮಾಣದ ವಿಚಾರದಿಂದ ಹಿಡಿದು ಗ್ವಾದರ್ ಬಂದರಿನ ಕಾರ್ಯಾಚರಣೆಯ ನಿಯಂತ್ರಣವನ್ನು ಪಡೆದುಕೊಳ್ಳುವವರೆಗೆ, ಚೀನಾ, ಭಾರತದಲ್ಲಿ ಹೊರಹೊಮ್ಮುವ ಪ್ರತಿಕ್ರಿಯೆಯ ಹೊರತಾಗಿಯೂ ಕಾರ್ಯನಿರ್ವಹಿಸಲು ಸಿದ್ಧವಾಗಿದೆ' ಎಂದು ಆಂಡ್ರ್ಯೂ ಸ್ಮಾಲ್, 2015 ರಲ್ಲಿ ಪ್ರಕಟವಾದ ತಮ್ಮ 'ದಿ ಚೀನಾ ಪಾಕಿಸ್ತಾನ್ ಆಕ್ಸಿಸ್' ಪುಸ್ತಕದಲ್ಲಿ ಬರೆದಿದ್ದದನ್ನು ಇಲ್ಲಿ ನೆನಪಿಸಿಕೊಳ್ಳಬೇಕಾಗಿದೆ.
ಒಟ್ಟಾರೆ ಕಾಶ್ಮೀರದ ನೆರಳು ಮತ್ತು ಪಾಕಿಸ್ತಾನದ ಮೇಲೆ ಭಿನ್ನತೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆಯ ಹೊರತಾಗಿಯೂ ಭಾರತ-ಚೀನಾ ಸಂಬಂಧವು ಒಮ್ಮುಖದ ಹಾದಿಯಲ್ಲಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳುವುದೇ ಇಲ್ಲಿ ಸವಾಲಾಗಿದೆ. ಹಾಗಂತ ಮುಂದಿನ ಕೆಲವು ವಾರಗಳಲ್ಲಿ ಮೋದಿ ಮತ್ತು ಕ್ಸಿ ಭೇಟಿಯಾಗುವುದರಿಂದ ಯಾವುದೇ ಪ್ರಮುಖ ಪ್ರಗತಿಯನ್ನು ನಿರೀಕ್ಷಿಸಲಾಗುವುದಿಲ್ಲ, ಏಕೆಂದರೆ ಸಂಬಂಧಗಳಲ್ಲಿ ಕುಸಿತವನ್ನು ತಡೆಗಟ್ಟುವುದೇ ಈ ಭೇಟಿಯ ಆದ್ಯತೆಯಾಗಿರುತ್ತದೆ. “ಒಳ್ಳೆಯ ವರ್ಷವನ್ನು ಆಶಿಸುವವನು ವಸಂತಕಾಲದಲ್ಲಿ ಯೋಜನೆಗಳನ್ನು ರೂಪಿಸುತ್ತಾನೆ” ಎಂಬ ಚೀನೀ ಗಾದೆಯನ್ನ ನಾವಿಲ್ಲಿ ನೆನೆಯಲೇಬೇಕು.