ನವದೆಹಲಿ: ಮೂರು ಬಾರಿ ದೆಹಲಿಯ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ನ ಆಧಿಪತ್ಯ ಸಾಧಿಸಿದ್ದ ಶೀಲಾ ದೀಕ್ಷಿತ್ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. 81 ವರ್ಷ ವಯಸ್ಸಿನ ಅವರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
1999ರಿಂದ 2013ರವರೆಗೆ ಸತತವಾಗಿ ಮೂರು ಸಲ ದೆಹಲಿ ಗದುಗೆ ಏರಿರುವ ಖ್ಯಾತಿ ಅವರಿಗಿದೆ. ವಿನೋದ್ ದೀಕ್ಷಿತ್ ಇವರ ಪತಿಯಾಗಿದ್ದಾರೆ. ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯ ಉಗೂ ಗ್ರಾಮದವರಾದ ವಿನೋದ್ ದೀಕ್ಷಿತ್ ಐಎಎಸ್ ಅಧಿಕಾರಿಯಾಗಿ ಜೀವನ ಆರಂಭಿಸಿದ್ದರು. ವಿನೋದ್ ದೀಕ್ಷಿತ್ ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಉಮಾ ದೀಕ್ಷಿತ್ ಅವರ ಪುತ್ರರಾಗಿದ್ದಾರೆ.
ಶೀಲಾ ದೀಕ್ಷಿತ್ 1938 ಮಾರ್ಚ್ 31ರಂದು ಪಂಜಾಬ್ನ ಕಪುರ್ತಲಾದಲ್ಲಿ ಜನಿಸಿದರು. ನವದೆಹಲಿಯಲ್ಲಿ ವಿದ್ಯಾಭ್ಯಾಸ ಮಾಡಿದ ಇವರು ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದರು. 1984ರಲ್ಲಿ ರಾಜಕೀಯ ಪ್ರವೇಶ ಮಾಡಿದ ಇವರು, ಉತ್ತರಪ್ರದೇಶದ ಕನೌಜ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆಲುವು ದಾಖಲಿಸಿದ್ದರು.
1989ರಲ್ಲೂ ಅದೇ ಕ್ಷೇತ್ರದಿಂದ ಮರು ಆಯ್ಕೆಯಾಗಿದ್ದರು. 1998ರ ದೆಹಲಿ ಈಸ್ಟ್ ಲೋಕಸಭಾ ಮತಕ್ಷೇತ್ರದಿಂದ ಸ್ಪರ್ಧೆ ಮಾಡಿ ಬಿಜೆಪಿ ಅಭ್ಯರ್ಥಿ ವಿರುದ್ಧ ಸೋಲು ಕಂಡು ಅದೇ ವರ್ಷ ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಿ ಸತತ 15 ವರ್ಷಗಳ ಕಾಲ ಆಡಳಿತ ನಡೆಸಿ, ಗಮನ ಸೆಳೆದಿದ್ದರು. ಶೀಲಾ ದೀಕ್ಷಿತ್ 1998ರಿಂದ 2003ರವರೆಗೆ ದೆಹಲಿಯ ಗೋಲ್ ಮಾರ್ಕೆಟ್ ವಿಧಾನಸಭಾ ಕ್ಷೇತ್ರವನ್ನ ಪ್ರತಿನಿಧಿಸಿದ್ದರು.
ಆ ಬಳಿಕ ಹೊಸ ದೆಹಲಿಯ ವಿಧಾನಸಭಾ ಕ್ಷೇತ್ರದಿಂದ ಪ್ರತಿನಿಧಿಸಿದ್ದರು. ಹೀಗೆ 15 ವರ್ಷ ದೆಹಲಿಯ ಸಿಎಂ ಆಗಿದ್ದ ಶೀಲಾ ದೀಕ್ಷಿತ್ ಅವರನ್ನ 2013ರಲ್ಲಿಆಮ್ ಆದ್ಮಿ ಪಾರ್ಟಿಯ ಅಭ್ಯರ್ಥಿ ಸೋಲಿಸಿರುವುದು ಇತಿಹಾಸ. 2010ರಲ್ಲಿ ನಡೆದ ಕಾಮನ್ವೇಲ್ತ್ ಹಗರಣ ಶೀಲಾ ದೀಕ್ಷಿತ್ ಸರ್ಕಾರದ ಮೇಲೆ ದೊಡ್ಡ ಪರಿಣಾಮ ಬೀರಿತ್ತು. ಇದೇ ವಿಷಯ ಹಾಗೂ ಅಭಿವೃದ್ಧಿ ಅಜೆಂಡಾ ಮೂಲಕ ಎಎಪಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತ್ತೆ ದೆಹಲಿಯ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಶೀಲಾ ದೀಕ್ಷಿತ್ ಪಕ್ಷ ಬಲವರ್ಧನೆಗೆ ಪಣತೊಟ್ಟಿದ್ದರು. ಆದರೆ ಮೋದಿ ಸುನಾಮಿ ಮುಂದೆ ಅವರು ವಿಫಲಗೊಂಡರು.
ಇದಾದ ಬಳಿಕ ದೆಹಲಿ ಕಾಂಗ್ರೆಸ್ ಘಟಕದಲ್ಲಿ ದೊಡ್ಡ ಅಸಮಾಧಾನ ಭುಗಿಲೆದ್ದಿತು. ಈ ಎಲ್ಲ ಘಟನೆಗಳ ಮಧ್ಯೆಯೇ ಅನಾರೋಗ್ಯಕ್ಕೀಡಾದ ಶೀಲಾ ದೀಕ್ಷಿತ್ ತಮ್ಮ 81ನೇ ವಯಸ್ಸಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.