ನವದೆಹಲಿ: ದೇಶದ ಜಿಡಿಪಿ ಸಾರ್ವಕಾಲಿಕ ಶೇ.23.9ರಷ್ಟು ಕುಸಿತಗೊಂಡಿದ್ದು, ಇದೇ ವಿಷಯವನ್ನಿಟ್ಟುಕೊಂಡು ಇದೀಗ ಕಾಂಗ್ರೆಸ್ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜೀನಾಮೆಗೆ ಆಗ್ರಹಿಸಿವೆ.
ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ್ ಮಾತನಾಡಿದ್ದು, ನೋಟ್ ಬ್ಯಾನ್ ಮತ್ತು ಜಿಎಸ್ಟಿಯಂತಹ ನಿರ್ಧಾರ ತೆಗೆದುಕೊಳ್ಳುವ ಮೂಲಕ ಕೇಂದ್ರವು ದೇಶದಲ್ಲಿ ಆರ್ಥಿಕ ಅರಾಜಕತೆ ಹೇರುತ್ತಿದೆ ಎಂದಿದ್ದು, ಭಾರತದ ಆರ್ಥಿಕತೆ ಪ್ರಪಾತಕ್ಕೆ ಕರೆದೊಯ್ಯಲು ಇದು ಮುಖ್ಯ ಕಾರಣ ಎಂದಿದ್ದಾರೆ.
ದೇಶದ ಜಿಡಿಪಿ ಶೇ 24ರಷ್ಟು ಕಡಿಮೆಯಾಗಿದೆ. ಇಂತಹ ಸ್ಥಿತಿಯಲ್ಲಿ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವರಾಗಿ ಏಕೆ ಉಳಿಯಬೇಕು? ಅವರು ರಾಜೀನಾಮೆ ನೀಫಡಬೇಕು. ಅಥವಾ ಪ್ರಧಾನಿ ತಕ್ಷಣವೇ ಅವರನ್ನ ವಜಾಗೊಳಿಸಬೇಕು ಎಂದಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಸುರ್ಜೇವಾಲ್, ದೇಶದಲ್ಲಿ ಜೀವನ, ಜಿವನೋಪಾಯ ಮತ್ತು ಉದ್ಯೋಗ ಹಾಳಾಗಿವೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆ ನೆಲಕಚ್ಚಿದ್ದು, ಭಾರತವನ್ನ ಆರ್ಥಿಕ ತುರ್ತುಸ್ಥಿತಿಯಂತಹ ಪರಿಸ್ಥಿತಿಗೆ ತೆಗೆದುಕೊಂಡು ಹೋಗಿದೆ ಎಂದಿದ್ದಾರೆ.
ನವಿಲುಗಳಿಗೆ ಆಹಾರ ಹಾಕುವುದು ಅಥವಾ ದಿನಕ್ಕೆ ಮೂರು ಸಲ ಬಟ್ಟೆ ಬದಲಾಯಿಸುವ ಮೂಲಕ ಮೋದಿ ಭಾರತವನ್ನ ಆರ್ಥಿಕ ಪ್ರಪಾತದಿಂದ ಹೊರ ತರಲು ಸಾಧ್ಯವಿಲ್ಲ. 2019ರಲ್ಲಿ 14,019 ನಿರುದ್ಯೋಗಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ದೇಶದಲ್ಲಿ 40 ಕೋಟಿ ಭಾರತೀಯರು ಬಡತನ ರೇಖೆಗಿಂತ ಕೆಳಮಟ್ಟದಲ್ಲಿದ್ದು, 80 ಲಕ್ಷ ಜನರು ತಮ್ಮ ಇಪಿಎಫ್ಒ ಖಾತೆಯಿಂದ 30,000 ಕೋಟಿ ರೂ ತೆಗೆದುಕೊಂಡಿದ್ದಾರೆ. ಚೀನಾ ಜತೆಗಿನ ಸಂಘರ್ಷ, ಜಿಡಿಪಿ ಕುಸಿತ, ಆತ್ಮಹತ್ಯೆ ಮತ್ತು ಉದ್ಯೋಗ ನಷ್ಟದ ಪ್ರಶ್ನೆಗಳಿಗೆ ಉತ್ತರಿಸಲು ಕೇಂದ್ರ ಭಯಭೀತವಾಗಿದ್ದು, ಹೀಗಾಗಿ ಸಂಸತ್ತಿನ ಅಧಿವೇಶನದಲ್ಲಿ ಪ್ರಶ್ನಾವಳಿ ಸಮಯ ತೆಗೆದುಹಾಕಿದೆ ಎಂದು ಸುರ್ಜೇವಾಲ್ ಆರೋಪಿಸಿದ್ದಾರೆ.