ಪಾಟ್ನಾ (ಬಿಹಾರ): ಇಲ್ಲಿನ 11 ಜಿಲ್ಲೆಗಳು ಪ್ರವಾಹ ಪೀಡಿತ ಪ್ರದೇಶಗಳಾಗಿವೆ. ಈ ಪ್ರದೇಶಗಳು ಒಂದು ದಶ ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನ ಹೊಂದಿವೆ. ಈವರೆಗೆ ಪ್ರವಾಹದಿಂದ 10 ಜನ ಮೃತಪಟ್ಟಿದ್ದಾರೆ ಎಂದು ಬಿಹಾರದ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ.
11 ಜಿಲ್ಲೆಗಳ 93 ಬ್ಲಾಕ್‌ಗಳ 765 ಪಂಚಾಯಿತಿಗಳಲ್ಲಿ ಒಟ್ಟು 24.42 ಲಕ್ಷ ಜನರು ಪ್ರವಾಹಕ್ಕೆ ತುತ್ತಾಗಿದ್ದಾರೆ. ದರ್ಭಂಗ ಜಿಲ್ಲೆ ಅತಿ ಹೆಚ್ಚು ಹಾನಿಗೊಳಗಾಗಿದೆ. ಅಲ್ಲಿನ 14 ಬ್ಲಾಕ್‌ಗಳಲ್ಲಿ 8.87 ಲಕ್ಷ ಜನರನ್ನು ಸ್ಥಳಾಂತರಗೊಳಿಸಲಾಗಿದೆ ಎಂದು ಬಿಹಾರ ಸರ್ಕಾರ ತಿಳಿಸಿದೆ.
ದರ್ಭಂಗ ಹೊರತುಪಡಿಸಿ, ಪೂರ್ವ ಚಂಪಾರಣ್ ಮತ್ತು ಮುಜಾಫರ್ಪುರ ಜಿಲ್ಲೆಗಳು ಹಾನಿಗೊಳಗಾಗಿವೆ. ಅಲ್ಲಿ ಪ್ರವಾಹ ಪರಿಸ್ಥಿತಿಯು 7.0 ಲಕ್ಷ ಮತ್ತು 3.20 ಲಕ್ಷ ಜನರ ಮೇಲೆ ಪರಿಣಾಮ ಬೀರಿದೆ.
ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳು ಆಹಾರ ಪ್ಯಾಕೆಟ್ ನೀಡುವ ಕಾರ್ಯವನ್ನು ಗೋಪಾಲ್‌ಗಂಜ್, ದರ್ಭಂಗ ಮತ್ತು ಪೂರ್ವ ಚಂಪಾರನ್ ಜಿಲ್ಲೆಗಳಲ್ಲಿ ನಿಲ್ಲಿಸಲಾಗಿದೆ. ಜುಲೈ 25ರಂದು ಈ ಪ್ರದೇಶಗಳಲ್ಲಿ ಕಾರ್ಯಾಚರಣೆ ಪ್ರಾರಂಭವಾಗಿತ್ತು.
ದೋಣಿ ಮತ್ತು ಇತರ ವಿಧಾನಗಳ ಮೂಲಕ ಈ ಸ್ಥಳಗಳಲ್ಲಿ ಆಹಾರ ವಿತರಣೆ ನಡೆಯಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.